ಲಾಕ್‍ಡೌನ್ ಸಡಿಲಿಕೆಯಿಂದ ರಾಜ್ಯದಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗಿವೆ: ಕೇಂದ್ರ ಸಚಿವ ಸುರೇಶ್ ಅಂಗಡಿ

ಬೆಳಗಾವಿ, ಮೇ 11: ದೇಶದಾದ್ಯಂತ ನಾಳೆ(ಮೇ 12)ಯಿಂದ ಭಾಗಶಃ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಜನರ ಸಂಚಾರಕ್ಕೆ 15 ರೈಲುಗಳನ್ನು ನಾಳೆಯಿಂದ ಆರಂಭಿಸಲಾಗುತ್ತಿದೆ. ಪ್ರಯಾಣಿಕರು ಆನ್‍ಲೈನ್ ಮೂಲಕ ಐ.ಆರ್.ಟಿ.ಸಿ.ಯಲ್ಲಿ ಟಿಕೆಟ್‍ಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿ ಸಾರ್ವಜನಿಕರು ಜಾಗರೂಕತೆಯಿಂದ ಸಂಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರಕಾರ ಸದ್ಯ 15 ರೈಲುಗಳ ಸಂಚಾರವನ್ನು ಪ್ರಾರಂಭಿಸಲು ಹಸಿರು ನಿಶಾನೆ ತೋರಿಸಿದೆ. ಸಮಸ್ಯೆಗಳನ್ನು ನೋಡಿಕೊಂಡು ಆಯಾ ರಾಜ್ಯದಲ್ಲಿ ರೈಲುಗಳ ಸಂಚಾರ ಮಾಡುವ ಬಗ್ಗೆ ವಿಚಾರ ಮಾಡುತ್ತೇವೆ ಎಂದರು. ಆನ್‍ಲೈನ್‍ನಲ್ಲಿ ಟಿಕೆಟ್‍ಗಳನ್ನು ಬುಕ್ ಮಾಡಿದವರು ಮಾತ್ರ ಸ್ಟೇಷನ್‍ಗೆ ಬರಬೇಕು ಎಂದು ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಪ್ರತಿಯೊಬ್ಬ ಪ್ರಯಾಣಿಕರ ಜವಾಬ್ದಾರಿಯಾಗಿದೆ. ರೈಲುಗಳಲ್ಲಿ ಸಾಮಾನ್ಯ ಬೋಗಿಗಳು ಇರುವುದಿಲ್ಲ. ರೈಲುಗಳು ರಾಜಧಾನಿ ದೆಹಲಿಯಿಂದ ಬೇರೆ ಬೇರೆ ರಾಜ್ಯಗಳಿಗೆ ಸಂಚರಿಸುತ್ತವೆ. ಶ್ರಮಿಕ ರೈಲುಗಳು ಆಯಾ ರಾಜ್ಯಗಳಲ್ಲಿ ಪ್ರಯಾಣ ಕೈಗೊಳ್ಳುತ್ತವೆ ಎಂದರು.
ಸ್ಟೇಷನ್‍ನಲ್ಲಿ ಪ್ರಯಾಣಿಕರ ಆರೋಗ್ಯವನ್ನು ತಪಾಸಣೆ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದು, ಮುಖ್ಯಮಂತ್ರಿಗಳ ಅಭಿಪ್ರಾಯದ ಮೇಲೆ ಕೊರೋನ ಲಾಕ್‍ಡೌನ್ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಲಾಕ್‍ಡೌನ್ ಅಲ್ಪ ಸಡಿಲಿಕೆಯಿಂದ ರಾಜ್ಯದಲ್ಲಿ ಕೊರೋನ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಹಸಿರು ವಲಯಗಳಲ್ಲಿಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುವುದನ್ನು ಗಮನಿಸಬಹುದು. ಇದೀಗ ಬೆಳಗಾವಿಯಲ್ಲಿ ಹೆಚ್ಚು ಕೊರೋನ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಕಿತ್ತಳೆ ವಲಯದಲ್ಲಿರುವ ಬೆಳಗಾವಿ ಜಿಲ್ಲೆಯು ಕೆಂಪು ವಲಯಕ್ಕೆ ಸೇರಲ್ಪಡುತ್ತದೆ ಎಂಬ ಆತಂಕವಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಮೆಟ್ರೋ ರೈಲು ಆರಂಭಿಸುವ ಬಗ್ಗೆಯೂ ರಾಜ್ಯ ಸರಕಾರ ನಿರ್ಧಾರಗಳನ್ನು ಕೈಗೊಳ್ಳಲಿದೆ. ಮೆಟ್ರೋ ರೈಲುಗಳು ಆಯಾ ರಾಜ್ಯ ಸರಕಾರಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಅವುಗಳನ್ನು ಆಯಾ ರಾಜ್ಯ ಸರಕಾರಗಳು ತಮ್ಮ ತಮ್ಮ ಪರಿಸ್ಥಿತಿಗನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳಲಿವೆ ಎಂದು ತಿಳಿಸಿದರು.







