24 ಗಂಟೆಗಳಲ್ಲಿ ದಂಪತಿಯ ಬರ್ಬರ ಹತ್ಯೆ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು

ಬೆಂಗಳೂರು, ಮೇ 11: ನಗರದಲ್ಲಿ ನಡೆದಿದ್ದ ದಂಪತಿಯ ಬರ್ಬರ ಹತ್ಯೆ ಪ್ರಕರಣವನ್ನು ಘಟನೆ ನಡೆದ 24 ಗಂಟೆಗಳಲ್ಲೇ ಭೇದಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆವಲಹಳ್ಳಿ 2ನೇ ಮೈನ್ 2ನೇ ಕ್ರಾಸ್ ನಿವಾಸಿ ರಾಕೇಶ್ ಡಿ.(25) ಬಂಧಿತ ಆರೋಪಿಯಾಗಿದ್ದಾನೆ. ಕೋಣನಕುಂಟೆ ಬಳಿಯ ಆರ್ ಬಿಐ ಲೇಔಟ್‍ನ ಗೋವಿಂದಯ್ಯ(65) ಮತ್ತು ಶಾಂತಮ್ಮ(58) ಅವರನ್ನು ಕೊಲೆಗೈದ ಆರೋಪ ಈತನ ಮೇಲಿದೆ.
ಕೊಲೆಯಾದ ದಂಪತಿಯ ಸೊಸೆಯ ತಮ್ಮನಾಗಿದ್ದ ಆರೋಪಿಯು ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದು ಇದೇ ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಡಿಸಿಪಿ ಡಾ.ರೋಹಿಣಿ ಕಟೋಚ್ ತಿಳಿಸಿದ್ದಾರೆ.
ಗೋವಿಂದಯ್ಯ ಅವರ ಪುತ್ರ ನವೀನ್ ಬಿ.ಜಿ. ಅವರು 2008ರಲ್ಲಿ ಡಿ.ಪವಿತ್ರ ಎಂಬುವವರನ್ನು ವಿವಾಹವಾಗಿದ್ದರು. ಪತ್ನಿಯೊಂದಿಗೆ ಹೊಂದಾಣಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗಿ ನಂತರ ಕೌಟುಂಬಿಕ ನ್ಯಾಯಾಲಯದಲ್ಲಿ ಕೌನ್ಸಿಲಿಂಗ್ ಮೂಲಕ ಮತ್ತೆ ವಾಪಾಸ್ಸು ಮನೆಗೆ ಬಂದಿದ್ದರು. ಅಂದಿನಿಂದ ಈ ವಿಚಾರವಾಗಿ ಪವಿತ್ರ ಅವರ ಸಹೋದರ ಆರೋಪಿ ರಾಕೇಶ್ ದ್ವೇಷ ಇಟ್ಟುಕೊಂಡು ಗಲಾಟೆ ಮಾಡುತ್ತಿದ್ದ ಎನ್ನಲಾಗಿದ್ದು, ಮೇ 10 ರಂದು ಸಂಜೆ 7.15ರ ಸುಮಾರಿಗೆ ನವೀನ್ ತನ್ನ ಹೆಂಡತಿಯನ್ನು ಕರೆತಂದು ಮನೆಗೆ ಬಿಡುವಂತೆ ರಾಕೇಶ್‍ಗೆ ಫೋನ್ ಮೂಲಕ ಹೇಳಿದ್ದಾನೆ.
ಈ ವೇಳೆ ಇಬ್ಬರಿಗೂ ಫೋನ್‍ನಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರಾಕೇಶನು ನವೀನ್ ಮತ್ತು ಅವರ ತಂದೆ ಬಿ.ಜಿ.ಗೋವಿಂದಯ್ಯ ಅವರಿಗೆ ಕರೆ ಮಾಡಿ, ಈಗ ನಾನು ಅಲ್ಲಿಗೆ ಬಂದು ಏನು ಮಾಡುತ್ತೇನೆ ನೋಡುತ್ತಿರಿ ಎಂದು ಹೆದರಿಸಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸದ ನವೀನ್ ಸಂಜೆ 7.30ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಾನೆ ಎನ್ನಲಾಗಿದೆ.
ಈ ವೇಳೆ ಅಂದರೆ ರಾತ್ರಿ 7.30ರಿಂದ 8.45ರ ಮಧ್ಯೆ ಆರೋಪಿ ರಾಕೇಶ್, ನವೀನ್ ಅವರ ಮನೆಗೆ ಬಂದು ನವೀನ್ ರ ತಂದೆ ಗೋವಿಂದಯ್ಯ ಮತ್ತು ತಾಯಿ ಶಾಂತಮ್ಮ ಅವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ನವೀನ್ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ನವೀನ್ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಣನಕುಂಟೆ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಎಂ.ಧರ್ಮೇಂದ್ರ ಅವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಎಸಿಪಿ ಮಂಜುನಾಥ ಬಾಬು ಅವರ ನೇತೃತ್ವದಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಎಂ. ಧರ್ಮೇಂದ್ರ ಮತ್ತು ಸಿಬ್ಬಂದಿಯವರ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಕೊಲೆಯಾದ 24 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿ ಆರೋಪಿ ರಾಕೇಶ್ ಡಿ.(25)ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದ್ವೇಷದಿಂದ ಈ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಕೋಣನಕುಂಟೆ ಪೊಲೀಸ್ ಠಾಣೆಯ ಪಿಐ ಟಿ.ಎಂ.ಧರ್ಮೇಂದ್ರ, ಪಿಎಸ್‍ಐ ಶ್ರೀನಿವಾಸಪ್ರಸಾದ್, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪಿಎಸ್‍ಐ ಅಕ್ಷತಾ ಹಾಗೂ ಕೋಣನಕುಂಟೆ ಠಾಣೆಯ ಸಿಬ್ಬಂದಿ ಸಿದ್ದೇಗೌಡ, ನಾಗ ರಾಜು, ಶೈಲೇಶ್, ಕುಮಾರ್, ಗೋಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







