ಮುಂಬೈ ಹೊಟೇಲ್‍ಗಳಲ್ಲಿ ಅತಂತ್ರರಾಗಿರುವ ರಾಜ್ಯದ ಕಾರ್ಮಿಕರನ್ನು ಕರೆತನ್ನಿ: ಸರಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಮೇ 11: ಹೊಟೇಲ್‍ಗಳನ್ನು ತೆರೆಯಲು ಮಹಾರಾಷ್ಟ್ರ ಮುಖ್ಯಮಂತ್ರಿಯ ಮನವೊಲಿಸುತ್ತಿರುವ ಮಾಲಕರು, ಇದೇ ಕಾರಣಕ್ಕೆ ರೈಲ್ವೆ ವ್ಯವಸ್ಥೆ ಮಾಡದಂತೆ ಎರಡೂ ರಾಜ್ಯಗಳ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಆರೋಪವಿದೆ. ಇದು ಕಾರ್ಮಿಕರಿಗೆ ಎರಡೂ ರಾಜ್ಯಗಳ ಸರಕಾರಗಳು ಬಗೆಯುತ್ತಿರುವ ದ್ರೋಹ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, "ಮುಂಬೈನ ಹೊಟೇಲ್‍ಗಳಲ್ಲಿ ದುಡಿಯುತ್ತಿರುವ ಕರ್ನಾಟಕದ ಸಾವಿರಾರು ಕಾರ್ಮಿಕರು ಲಾಕ್‍ಡೌನ್‍ನಿಂದಾಗಿ ಸಂಬಳ, ಊಟ, ಸರಿಯಾದ ವಸತಿ ಇಲ್ಲದೆ ಅತಂತ್ರರಾಗಿದ್ದಾರೆ. ಅವರನ್ನು ರಾಜ್ಯಕ್ಕೆ ಕರೆತಂದು ತಪಾಸಣೆ, ಕ್ವಾರಂಟೈನ್‍ಗೊಳಪಡಿಸಿ ಮನೆಗೆ ಕಳುಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ವ್ಯವಸ್ಥೆ ಮಾಡಬೇಕು'' ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದಿಂದ ಬೇರೆ ರಾಜ್ಯಗಳಿಗೆ ರೈಲಿನಲ್ಲಿ ಕಾರ್ಮಿಕರು ತೆರಳುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ರೈಲು-ಬಸ್ ವ್ಯವಸ್ಥೆ ಇಲ್ಲ. ಇದಕ್ಕೆ ಕರ್ನಾಟಕ ಸರಕಾರದ ಅಸಹಕಾರ ಕಾರಣ ಎಂದು ಮಹಾರಾಷ್ಟ್ರ ಹೇಳುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.
ಖಾಸಗಿ ವಾಹನಗಳಲ್ಲಿ ರಾಜ್ಯಕ್ಕೆ ಬರಲು ಮಹಾರಾಷ್ಟ್ರ ಮುಖ್ಯಮಂತ್ರಿ ಅನುಮತಿ ನೀಡಿರುವುದರಿಂದ ದುಡ್ಡಿದ್ದವರು ನಿಶ್ಚಿಂತೆಯಾಗಿ ಊರು ಸೇರುತ್ತಿದ್ದಾರೆ. ದುಡ್ಡಿಲ್ಲದವರು ಏನು ಮಾಡಬೇಕು? ಮುಖ್ಯಮಂತ್ರಿ ಯಡಿಯೂರಪ್ಪ ಮಾತುಕತೆ ನಡೆಸಿ ಎರಡೂ ರಾಜ್ಯಗಳ ನಡುವೆ ರೈಲು-ಬಸ್ ಸಂಚಾರಕ್ಕೆ ತಕ್ಷಣ ವ್ಯವಸ್ಥೆ ಮಾಡಬೇಕು' ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.







