ಬಂಟ್ವಾಳ: ಆಶಾ ಕಾರ್ಯಕರ್ತೆ, ಟಾಸ್ಕ್ ಫೋರ್ಸ್ ಅಧ್ಯಕ್ಷರಿಗೆ ಬೆದರಿಕೆ ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ, ಮೇ 11: ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಅಧ್ಯಕ್ಷರಿಗೆ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ಇಬ್ಬರ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕು ಕುಕ್ಕಿಪ್ಪಾಡಿ ಗ್ರಾಮದ ಅಭ್ಯಂತ್ ಎಂಬಲ್ಲಿ ನಿವಾಸಿಗಳಾದ ವಿಶ್ವನಾಥ ಆಚಾರ್ಯ ಮತ್ತು ಶ್ರೀಮತಿ ಆಚಾರ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕುಕ್ಕಿಪ್ಪಾಡಿ ಗ್ರಾಮದಲ್ಲಿ ಕರ್ತವ್ಯದಲ್ಲಿ ಇದ್ದ ಆಶಾ ಕಾರ್ಯಕರ್ತೆ ಪುಷ್ಪಲತಾ ಎಂಬವರು ರವಿವಾರ ಆರೋಪಿಗಳಾದ ವಿಶ್ವನಾಥ ಆಚಾರ್ಯ ಮತ್ತು ಶ್ರೀಮತಿ ಆಚಾರ್ಯ ಅವರ ಮನೆ ಪರಿಸರದಲ್ಲಿ ಹಲವಾರು ವಾಹನ ಮತ್ತು ಜನರು ಗುಂಪುಗೂಡಿರುವುದನ್ನು ಗಮನಿಸಿ ಈ ಬಗ್ಗೆ ಮನೆ ಮಂದಿಯಲ್ಲಿ ಮಾಹಿತಿ ಕೇಳಲು ಹೋದಾಗ ಆಶಾ ಕಾರ್ಯಕರ್ತೆಯನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ ಪೊರಕೆಯಿಂದ ಹಲ್ಲೆಗೆ ಯತ್ನಿಸಲಾಗಿದೆ. ಕೂಡಲೇ ಅವರು ಈ ವಿಷಯವನ್ನು ಗ್ರಾಮ ಪಂಚಾಯತ್ ಟಾಸ್ಕ್ ಪೋರ್ಸ್ ಅಧ್ಯಕ್ಷರಿಗೆ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.





