ಕೋವಿಡ್-19 ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ: ಡಿ.ಕೆ.ಶಿವಕುಮಾರ್ ಆರೋಪ

ಬೆಂಗಳೂರು, ಮೇ 11: ಕೋವಿಡ್-19 ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕರ್ನಾಟಕಕ್ಕೆ ವಾಪಸ್ ಮರಳಲು ಇಚ್ಛಿಸುವವರಿಗೆ ರೈಲು ಸೇವೆ ಕಲ್ಪಿಸಿ, ಅವರ ಟಿಕೆಟ್ ದರವನ್ನು ಕಾಂಗ್ರೆಸ್ ಪಕ್ಷ ಭರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೈರುತ್ಯ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮಾ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಸ್ಯೆ ಆರಂಭವಾದ ಒಂದೂವರೇ ತಿಂಗಳ ಹಿಂದೆಯೇ ಕೇರಳ ಸರಕಾರ 20 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸಿತು. ಈ ವಿಚಾರವಾಗಿ ವಿಶೇಷ ಅಧಿವೇಶನ ಕರೆದು ಎಲ್ಲ ವರ್ಗದ ಜನರಿಗೆ, ಉದ್ಯೋಗಿಗಳಿಂದ ಹಿಡಿದು, ಉದ್ಯೋಗದಾತರು, ಅಸಂಘಟಿತ ಕಾರ್ಮಿಕರು, ರೈತರು, ಕೈಗಾರಿಕೆಗಳು ಎಲ್ಲರ ಹಿತ ಕಾಯಲು ನೆರವಾಗುವಂತೆ 50 ಸಾವಿರ ಕೋಟಿಯ ವಿಶೇಷ ಪ್ಯಾಕೇಜ್ ಅನ್ನು ಬಜೆಟ್‍ನಲ್ಲಿ ಪ್ರಕಟಿಸಿ ಎಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ಆದರೆ, ಸರಕಾರ ಇದನ್ನು ಕೇಳಿಸಿಕೊಳ್ಳುತ್ತಿಲ್ಲ. ಸರಕಾರದ ಬಳಿ ದುಡ್ಡಿದೆ. ಬಜೆಟ್ ಪುನರ್ ಪರಿಶೀಲಿಸಿ ಅನುದಾನವನ್ನು ನೀಡಲು ಹೆಚ್ಚು ಸಮಸ್ಯೆ ಇಲ್ಲ. ಆಡಳಿತ ಪಕ್ಷದ ನಾಯಕರು ತಮ್ಮ ಜೇಬಿನಿಂದ ದುಡ್ಡು ಹಾಕುವ ಅಗತ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಯಾವ ವರ್ಗಕ್ಕೆ ಎಷ್ಟು ಕೊಡಬೇಕು ಎಂಬುದನ್ನಷ್ಟೇ ತೀರ್ಮಾನಿಸಬೇಕಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ನೀಡಿ, ಯಾರು ಹೊರಗಡೆಯಿಂದ ಬಂದಿದ್ದಾರೋ ಅವರಿಗೆ ಸರಿಯಾಗಿ ಆಹಾರ ಕಿಟ್, ಹಣ ನೀಡಿದ್ದರೆ ಅವರೇಕೆ ಲಕ್ಷಾಂತರ ಸಂಖ್ಯೆಯಲ್ಲಿ ವಾಪಸ್ ಹೋಗುತ್ತಿದ್ದರು ? ಅವರನ್ನು ಸರಿಯಾಗಿ ನೋಡಿಕೊಳ್ಳದೇ, ಆಹಾರ ಕಿಟ್‍ಗಳನ್ನು ತಮ್ಮ ಕಾರ್ಯಕರ್ತರಿಗೆ ಹಂಚಿದ ಪರಿಣಾಮ ಇಂದು ಈ ಸ್ಥಿತಿ ನಿರ್ಮಾಣವಾಗಿದೆ. ಈ ಸ್ಥಿತಿ ಕೊರೋನ ವಿಚಾರದಲ್ಲೂ ರಾಜಕಾರಣ ಮಾಡಿದೆಯೇ ಹೊರತು ನಿಜವಾದ ಶ್ರಮಿಕರ ನೆರವಿಗೆ ಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್‍ನಿಂದ ಅಳಿಲು ಸೇವೆ: ಮೇ 12ರಿಂದ ರೈಲು ಸೇವೆ ಆರಂಭವಾಗಲಿದೆ. ರಾಜ್ಯದಿಂದ ಹೊಸದಿಲ್ಲಿಗೆ ಒಂದು ರೈಲೂ ಹೋಗತ್ತಿದೆ. ಇದಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಠೇವಣಿ ಇಟ್ಟಿದೆ. ನಮ್ಮ ದೇಶವನ್ನು ಕಟ್ಟುತ್ತಿರುವ ಕಾರ್ಮಿಕರನ್ನು ಕರೆತರಲು ಕಾಂಗ್ರೆಸ್ ಕೂಡ ಅಳಿಲು ಸೇವೆ ಮಾಡಲಿದೆ. ಹೀಗಾಗಿ, ಇಂದು ನೈರುತ್ಯ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮಾ ಅವರನ್ನು ಭೇಟಿ ಮಾಡಿ ಕನ್ನಡಿಗರನ್ನು ವಾಪಸ್ ಕರೆತರಲು ಅಗತ್ಯ ರೈಲು ಸೇವೆ ನೀಡಿ. ಅದಕ್ಕೆ ತಗಲುವ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಮನವಿ ಮಾಡಲಾಗಿದೆ. ಈ ಮನವಿಗೆ ಅಧಿಕಾರಿಗಳೂ ಸ್ಪಂದಿಸಿದ್ದು, ಮೇಲಾಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅವರು ಹೇಳಿದಾಗ ಪಕ್ಷದಿಂದಲೇ ಹಣ ಕಟ್ಟಲಾಗುತ್ತದೆ ಎಂದು ತಿಳಿಸಿದರು.
ನೈರುತ್ಯ ರೈಲ್ವೆಯ ಅಧಿಕಾರಿಗೆ ಮನವಿ ಸಲ್ಲಿಸುವಾಗ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಸಂಸದ ಡಿ.ಕೆ.ಸುರೇಶ್, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಉಪಸ್ಥಿತರಿದ್ದರು.







