ಶ್ರಮಿಕ ರೈಲುಗಳಿಗೆ ಹೊಸ ಮಾರ್ಗದರ್ಶಿ ಸೂತ್ರ: ಇನ್ನು ಮುಂದೆ ಪ್ರತಿ ಶ್ರಮಿಕ್‌ರೈಲಿನಲ್ಲಿ 1700 ಪ್ರಯಾಣಿಕರ ಸಾಗಣೆ
3 ನಿಲ್ದಾಣಗಳಲ್ಲಿ ನಿಲುಗಡೆ

ಹೊಸದಿಲ್ಲಿ, ಮೇ 11:ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸಾಗಿಸಲು ನಿಯೋಜಿಸಲಾದ ವಿಶೇಷ ‘ಶ್ರಮಿಕ ರೈಲುಗಳ’ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ರೈಲ್ವೆ ಸಚಿವಾಲಯವು ಸೋಮವಾರ ಪರಿಷ್ಕರಿಸಿದೆ.
ನೂತನ ಮಾರ್ಗದರ್ಶಿಗಳ ಪರಿಷ್ಕರಣೆಯಿಂದಾಗಿ ಇನ್ನು ಮುಂದೆ ಶ್ರಮಿಕ ರೈಲುಗಳಿಗೆ ತಲಾ 1700 ಪ್ರಯಾಣಿಕರನ್ನು ಕೊಂಡೊಯ್ಯಲು ಸಾಧ್ಯವಾಗಲಿದೆ. ಕಳೆದ 10 ದಿನಗಳಿಂದ ಶ್ರಮಿಕ ರೈಲುಗಳಲ್ಲಿ ತಲಾ 1200 ವಲಸೆ ಕಾರ್ಮಿಕರನ್ನು ಮಾತ್ರವೇ ಸಾಗಿಸಲಾಗುತ್ತಿತ್ತು.
‘ಶ್ರಮಿಕ ರೈಲುಗಳ’ ಆಸನಸಾಮರ್ಥ್ಯವು ಸ್ಲೀಪರ್‌ಬರ್ತ್‌ಗಳ ಸಂಖ್ಯೆಗಳಿಗೆ ಸಮಾನವಾಗಿರಬೇಕು ಎಂದು ಸಚಿವಾಲಯವು ತನ್ನ ಪರಿಷ್ಕೃತ ಮಾರ್ಗದರ್ಶಿಸೂಚಿಯಲ್ಲಿ ತಿಳಿಸಿದೆ. ‘ಶ್ರಮಿಕ್’ ವಿಶೇಷ ರೈಲುಗಳು 24 ಕೋಚ್ ಗೆ ಳಿರಬೇಕಾಗಿದ್ದು, ಪ್ರತಿಯೊಂದು ಕೋಚ್‌ನಲ್ಲಿಯೂ ತಲಾ 72ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿರಬೇಕೆಂದು ಅದು ಹೇಳಿದೆ.
ನೂತನ ಮಾರ್ಗಸೂಚಿ ಪ್ರಕಾರ ಶ್ರಮಿಕ್ ವಿಶೇಷ ರೈಲುಗಳು ಇನ್ನು ಮುಂದೆ ಸಂಚಾರದ ವೇಳೆ ಟರ್ಮಿನಲ್ ನಿಲ್ದಾಣಗಳನ್ನು ಹೊರತುಪಡಿಸಿ, ಮೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ. ರೈಲು ಯಾವ ರಾಜ್ಯವನ್ನು ತಲುಪಬೇಕೋ ಆ ರಾಜ್ಯದ ಮೂರು ನಿಲ್ದಾಣಗಳಲ್ಲಿ ಅದು ನಿಲುಗಡೆಗೊಳ್ಳಲಿದೆ ಎಂದರು.
ಮೇ 1ರಿಂದ ಹಿಡಿದು 10ನೇ ತಾರೀಕಿನವರೆಗೆ ಒಟ್ಟು 468ಶ್ರಮಿಕ ಸ್ಪೆಷಲ್ ರೈಲುಗಳು 5 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಸಾಗಿಸಿವೆ. ಈ ಪೈಕಿ 363 ರೈಲುಗಳು ತಮ್ಮ ಗಮ್ಯವನ್ನು ತಲುಪಿದ್ದು, 105 ಸಂಚಾರದಲ್ಲಿವೆಯೆಂದು ರೈಲ್ವೆ ಮೂಲಗಳು ತಿಳಿಸಿವೆ.
‘‘ರೈಲ್ವೆಗೆ ಪ್ರತಿ ದಿನ 300 ರೈಲುಗಳನ್ನು ಓಡಿಸುವ ಸಾಮರ್ಥ್ಯವಿದೆ ಹಾಗೂ ನಾವು ಅದನ್ನು ಗರಿಷ್ಠಗೊಳಿಸಲು ಬಯಸುತ್ತಿದ್ದೇವೆ’’ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ‘ಶ್ರಮಿಕ ರೈಲು’ಗಳನ್ನು ಓಡಿಸುವುದಕ್ಕಾಗಿ ರೈಲ್ವೆ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.
ಕೊರೋನ ವೈರಸ್ ತಡೆಗಾಗಿ ರಾಷ್ಟ್ರಾದ್ಯಂತ ಲಾಕ್‌ಡೌನ್ ಹೇರಿಕೆಯ ಹಿನ್ನೆಲೆಯಲಿ ದುಡಿಮೆಯಿಲ್ಲದೆ ಕಂಗಾಲಾಗಿದ್ದ ಲಕ್ಷಾಂತರ ಕಾರ್ಮಿಕರು ತಮ್ಮ ಊರುಗಳಿಗೆ ವಾಪಾಸಾಗುತ್ತಿದ್ದಾರೆ.







