ರಾಜ್ಯದಲ್ಲಿ 35 ಪ್ರಯೋಗಾಲಯಗಳಲ್ಲಿ ದಿನಕ್ಕೆ 6 ಸಾವಿರ ಕೊರೋನ ಪರೀಕ್ಷೆ: ಸಿಎಂ ಯಡಿಯೂರಪ್ಪ
ಪ್ರಧಾನಿ ಜೊತೆ ಮುಖ್ಯಮಂತ್ರಿ ವಿಡಿಯೋ ಸಂವಾದ

ಬೆಂಗಳೂರು, ಮೇ 11: 'ಕೊರೋನ ವೈರಸ್ ಸೋಕು ತಡೆಗಟ್ಟುವ ನಿಟ್ಟಿನಲ್ಲಿ ಜನರು ಹೊಸ ಜೀವನ ಶೈಲಿ ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸುವುದರ ಜೊತೆಗೆ ಮನವೊಲಿಸಲು ಮುಂದಾಗಬೇಕಿದೆ. ಸೋಂಕು ತಡೆಗೆ ನಾಲ್ಕು 'ಟಿ'(ಟ್ರೇಸಿಂಗ್, ಟ್ರಾಕಿಂಗ್, ಟೆಸ್ಟಿಂಗ್ ಅಂಡ್ ಟ್ರೀಟಿಂಗ್)ಗಳ ಪ್ರಮುಖ ಪಾತ್ರ ವಹಿಸಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಪ್ರಧಾನಿ ಮೋದಿಯವರೊಂದಿಗೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, 'ಕೊರೋನ ಸೋಂಕು ಕುರಿತು ಜನರ ಪೂರ್ವಗ್ರಹಗಳನ್ನು ತೊಡೆಯಲು ಇದು ಫ್ಲೂನಂತೆಯೆ ಒಂದು ವೈರಲ್ ಸೋಂಕು. ಆದರೆ, ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಪಾಯಕಾರಿ ಎಂಬ ಅರಿವು ಮೂಡಿಸಬೇಕು' ಎಂಬ ಪ್ರಧಾನಿ ಮೋದಿಯವರ ಸಲಹೆಗೆ ಸಮ್ಮತಿಸಿದರು.
ಕನಿಷ್ಠ ಮೇ ಅಂತ್ಯದವರೆಗೆ ದೇಶದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಗಳನ್ನು ಪ್ರಾರಂಭಿಸಬಾರದು. ಅಂತರಾಜ್ಯ ಪ್ರಯಾಣಿಕರನ್ನು ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಬೇಕು. ಅಂತರ ರಾಜ್ಯ ಪ್ರಯಾಣಿಕರು ತಾವು ಹೊರಡುವ ಸ್ಥಳದಲ್ಲಿ ಆರೋಗ್ಯ ಪ್ರಮಾಣ ಪತ್ರವನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳಿಂದ ಪಡೆದುಕೊಳ್ಳಬೇಕು. ಆರೋಗ್ಯ ಪ್ರಮಾಣ ಪತ್ರ ಹೊಂದಿಲ್ಲದವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರಿಸಬೇಕು ಎಂದು ಪ್ರಧಾನಿ ಮೋದಿ ನಿರ್ದೇಶನ ನೀಡಿದರು.
ಜಿಲ್ಲಾವಾರು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸಬಾರದು. ಕಂಟೈನ್ಮೆಂಟ್ ಝೋನ್‍ಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಕ್ಲಸ್ಟರ್ ಗಳ 50ರಿಂದ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಬೇಕು. ಇತರೆ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕರ ಸಾರಿಗೆಗೆ ಅನುಮತಿ ನೀಡಬೇಕು. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸಾಧ್ಯವಾಗುವುದಲ್ಲದೆ, ರಾಜ್ಯಗಳು ಹಣಕಾಸು ಬಿಕ್ಕಟ್ಟಿನಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದು ಯಡಿಯೂರಪ್ಪ ಮನವಿ ಮಾಡಿದರು.
ರಾಜ್ಯದಲ್ಲಿ ಪ್ರಸ್ತುತ 35 ಪ್ರಯೋಗಾಲಯಗಳಲ್ಲಿ ದಿನಕ್ಕೆ 6 ಸಾವಿರ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿ 1ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ 60 ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿ ಇದೆ ಎಂದು ಯಡಿಯೂರಪ್ಪ ಇದೇ ವೇಳೆ ಪ್ರಧಾನಿಗೆ ಮಾಹಿತಿ ನೀಡಿದರು.
ಕೋರೋನ ಸೋಂಕಿನ ಹಿನ್ನೆಲೆಯಲ್ಲಿ ಇತರ ವೈದ್ಯಕೀಯ ಚಿಕಿತ್ಸೆಗಳು ನಿರ್ಲಕ್ಷಕ್ಕೊಳಗಾಗಿವೆ. ಖಾಸಗಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಉಳಿದ ರೋಗಿಗಳ ಚಿಕಿತ್ಸೆಗಾಗಿ ಕಾರ್ಯನಿರ್ವಹಿಸುವ ಕುರಿತು ಕೇಂದ್ರ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಪರೀಕ್ಷೆ ನಡೆಸುವ ಸಂಬಂಧ ಸಮಗ್ರ ಮಾರ್ಗಸೂಚಿಗಳನ್ನು ನೀಡಬೇಕು. ಪ್ರತಿ 10 ಲಕ್ಷಕ್ಕೆ ಕನಿಷ್ಠ ಎಷ್ಟು ಪರೀಕ್ಷೆ ನಡೆಸಬೇಕೆಂಬ ಬಗ್ಗೆ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಬೇಕು. ಕೇವಲ ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಹೊಂದಿರುವವರಿಗೆ ಮಾತ್ರ ಪರೀಕ್ಷೆ ನಡೆಸಬೇಕು. ಈ ಸೋಂಕಿಗೆ ಚಿಕಿತ್ಸೆ ನೀಡಲು ಟೆಲಿ-ಮೆಡಿಸಿನ್‍ನ್ನು ವ್ಯಾಪಕವಾಗಿ ಬಳಸಬೇಕು. ತೀವ್ರ ರೋಗ ಲಕ್ಷಣ ಹೊಂದಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು ಎಂದು ಅವರು ಹೇಳಿದರು.
60 ವರ್ಷಕ್ಕೂ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನವರು ಮನೆಯೊಳಗೇ ಸುರಕ್ಷಿತವಾಗಿರುವಂತೆ ಸಲಹೆ ನೀಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಬಳಕೆ ಮಾಡಬೇಕು. ಕೈತೊಳೆಯವುದು, ವೈಯಕ್ತಿಕ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ತಿಳಿಸಿದರು.






.jpg)
.jpg)

