ಬ್ರಿಟನ್: ಬೀಗಮುದ್ರೆ ಜೂನ್ 1ರವರೆಗೆ ವಿಸ್ತರಣೆ
ಪ್ರಧಾನಿ ಬೊರಿಸ್ ಜಾನ್ಸನ್ ಘೋಷಣೆ

ಲಂಡನ್, ಮೇ 11: ಬ್ರಿಟನ್‌ನಲ್ಲಿ ನೂತನ-ಕೊರೋನ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು ಏಳು ವಾರಗಳ ಹಿಂದೆ ಹಾಕಲಾಗಿರುವ ಬೀಗಮುದ್ರೆಯು ಇನ್ನೂ ಕನಿಷ್ಠ ಜೂನ್ 1ರವರೆಗೆ ಮುಂದುವರಿಯುತ್ತದೆ ಎಂದು ಪ್ರಧಾನಿ ಬೊರಿಸ್ ಜಾನ್ಸನ್ ರವಿವಾರ ಘೋಷಿಸಿದ್ದಾರೆ.
ಬೀಗಮುದ್ರೆಯನ್ನು ತೆರವುಗೊಳಿಸಲು ಇದು ಸಮಯವಲ್ಲ ಎಂದು ಟೆಲಿವಿಶನ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಹೇಳಿದರು. ಆದರೆ, ಜೂನ್ 1ರಂದು ಕೆಲವು ಪ್ರಾಥಮಿಕ ಶಾಲೆಗಳು ಪುನರಾರಂಭಗೊಳ್ಳಬಹುದು ಹಾಗೂ ಅಂಗಡಿಗಳು ತೆರೆಯಬಹುದು ಎಂದು ಅವರು ನುಡಿದರು.
ಕೆಲವು ಸಾರ್ವಜನಿಕ ಸ್ಥಳಗಳು ಜುಲೈ 1ರಿಂದ ಪುನರಾರಂಭಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ಆದರೆ, ವಿಮಾನದಲ್ಲಿ ಬ್ರಿಟನ್‌ಗೆ ಬರುವವರು ಕ್ವಾರಂಟೈನ್‌ಗೆ ಒಳಗಾಗಬೇಕಾಗಬಹುದು ಎಂದು ಅವರು ನುಡಿದರು.
ಬೀಗಮುದ್ರೆಯಿಂದ ಹೊರಬರುವ ಯೋಜನೆಯೊಂದನ್ನು ರೂಪಿಸಬೇಕಾದ ಅನಿವಾರ್ಯತೆಗೆ ಬ್ರಿಟನ್ ಒಳಗಾಗಿದೆ. ಅಲ್ಲಿ ಕೊರೋನ ವೈರಸ್‌ಗೆ ಈವರೆಗೆ ಸುಮಾರು 32,000 ಜನರು ಬಲಿಯಾಗಿದ್ದಾರೆ. ಕೊರೋನ ಸಾವಿನ ಸಂಖ್ಯೆಯಲ್ಲಿ ಅಮೆರಿಕದ ಬಳಿಕ ಬ್ರಿಟನ್ ಎರಡನೇ ಸ್ಥಾನದಲ್ಲಿದೆ.







