ಭಾರತೀಯ ಯೋಧರೊಂದಿಗೆ ಘರ್ಷಣೆ ಕುರಿತು ಚೀನಾದ ಪ್ರತಿಕ್ರಿಯೆ

ಹೊಸದಿಲ್ಲಿ, ಮೇ 11: ಉತ್ತರ ಸಿಕ್ಕಿಮ್‌ನಲ್ಲಿ 16,000 ಅಡಿಗಳಷ್ಟು ಎತ್ತರದ ಗಡಿ ಪ್ರದೇಶದಲ್ಲಿ ಶನಿವಾರ ಭಾರತೀಯ ಯೋಧರೊಂದಿಗೆ ತನ್ನ ಪಡೆಗಳು ಘರ್ಷಣೆಗಿಳಿದಿದ್ದ ಘಟನೆಯ ಕುರಿತು ಚೀನಾ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿದೆ. ತನ್ನ ಸೈನಿಕರು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಬದ್ಧರಾಗಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ಸೋಮವಾರ ಹೇಳಿದೆ.
ಬೀಜಿಂಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಅವರು, ‘ಚೀನಿ ಗಡಿ ಸೈನಿಕರು ನಮ್ಮ ಗಡಿ ಪ್ರದೇಶಗಳಲ್ಲಿ ಸದಾ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ನಮ್ಮ ಗಡಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಾಲಿ ವ್ಯವಸ್ಥೆಯಡಿ ಉಭಯ ರಾಷ್ಟ್ರಗಳು ನಿಕಟ ಸಂಪರ್ಕ ಮತ್ತು ಸಮನ್ವಯದಲ್ಲಿವೆ” ಎಂದು ಹೇಳಿದರು.
ಕೊರೋನ ವೈರಸ್ ಲಾಕ್‌ಡೌನ್ ನಡುವೆಯೇ ಉಭಯ ರಾಷ್ಟ್ರಗಳ ಸೈನಿಕರ ನಡುವಿನ ಹೊಯ್-ಕೈ ಚೀನಾದ ಆಕ್ರಮಣ ನಿಲುವನ್ನು ಪ್ರತಿಬಿಂಬಿಸುತ್ತಿದೆಯೇ ಎಂಬ ಪ್ರಶ್ನೆಗೆ ಲಿಜಿಯನ್,ಇದು ಆಧಾರರಹಿತ ಗ್ರಹಿಕೆಯಾಗಿದೆ ಎಂದು ಉತ್ತರಿಸಿದರು.
ಇದು ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವರ್ಷವಾಗಿದೆ ಮತ್ತು ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಕೈ ಜೋಡಿಸಿವೆ ಎಂದ ಅವರು,ಇಂತಹ ಪರಿಸ್ಥಿತಿಯಲ್ಲಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಉಭಯ ರಾಷ್ಟ್ರಗಳು ಒಗ್ಗೂಡಿ ಶ್ರಮಿಸಬೇಕಾಗಿದೆ ಹಾಗೂ ತಮ್ಮ ದ್ವಿಪಕ್ಷೀಯ ಸಂಬಂಧಗಳು ಮತ್ತು ಕೋವಿಡ್-19ರ ವಿರುದ್ಧ ಜಂಟಿ ಹೋರಾಟಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಲು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿ ಹಿಡಿಯಬೇಕಿದೆ ಎಂದು ಹೇಳಿದರು.







