ಕೊರೋನಾದಿಂದ ಗ್ರಾಮಗಳನ್ನು ರಕ್ಷಿಸೋಣ: ಪ್ರಧಾನಿ ಕರೆ

ಹೊಸದಿಲ್ಲಿ,ಮೇ 12: ದೇಶಾದ್ಯಂತ ಉಲ್ಬಣಿಸುತ್ತಿರುವ ಕೊರೋನ ವೈರಸ್‌ನ ಹಾವಳಿ ನಿಯಂತ್ರಿಸುವ ಕಾರ್ಯತಂತ್ರವನ್ನು ಬಲಪಡಿಸುವ ಜೊತೆಗೆ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಂಗಳವಾರ ಮಾತುಕತೆ ನಡೆಸಿದರು.
ದೇಶದ ಆರ್ಥಿಕತೆಯನ್ನು ಕಾಪಾಡುವ ಜೊತೆಗೆ, ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಭಾರತವು ಅತ್ಯಂತ ಸಮತೋಲನದ ಕಾರ್ಯತಂತ್ರವನ್ನು ರೂಪಿಸಬೇಕು ಹಾಗೂ ಅನುಷ್ಠಾನಕ್ಕೆ ತರಬೇಕಾಗಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಾರಣಾಂತಿಕ ಕೊರೋನ ವೈರಸ್ ಸೋಂಕು ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳುವುದು ದೇಶದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ ಎಂದವರು ಹೇಳಿದರು.
ಹೊಸದಿಲ್ಲಿಯಲ್ಲಿ ಸೋಮವಾರ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಈ ಭೀಕರ ಸೋಂಕಿನ ವಿರುದ್ಧ ಹೋರಾಟದಲ್ಲಿ ರಾಜ್ಯಗಳ ಪಾತ್ರವನ್ನು ಪ್ರಶಂಸಿಸಿದರು. ಕೋವಿಡ್-19 ಆಕ್ರಮಣದಿಂದ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಭಾರತವು ಯಶಸ್ವಿಯಾಗಿದೆಯೆಂಬ ಅಭಿಪ್ರಾಯವನ್ನು ಇಡೀ ಜಗತ್ತು ಹೊಂದಿದೆ ಎಂದವರು ತಿಳಿಸಿದರು.
ಕೊರೋನ ವೈರಸ್ ವಿರುದ್ಧ ಹೋರಾಟದ ಮುಂದಿನ ಹಾದಿಯಲ್ಲಿ ರಾಜ್ಯಗಳ ಅಭಿಪ್ರಾಯಗಳ ಆಧರಿಸಿ ಸಂತುಲಿತವಾದ ಕಾರ್ಯತಂತ್ರವೊಂದನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿಯವರು ಮುಖ್ಯಮಂತ್ರಿಗಳಿಗೆ ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ.
ಮಾರ್ಚ್ 25ರಂದು ಲಾಕ್‌ಡೌನ್ ಹೇರಿಕೆಯಾದ ಬಳಿಕ ಪ್ರಧಾನಿಯವರು ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಸಿದ ಐದನೆ ಸಭೆ ಇದಾಗಿದೆ.
ಸುರಕ್ಷಿತ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸದ ಅಥವಾ ಲಾಕ್‌ಡೌನ್‌ನ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನದಲ್ಲಿ ನ್ಯೂನತೆಗಳುಂಟಾದ ಕಡೆಗಳಲ್ಲಿ ಕೊರೋನಾ ವೈರಸ್ ಸಮಸ್ಯೆ ಉಲ್ಬಣಗೊಂಡಿರುವುದಾಗಿ ಮೋದಿ ತಿಳಿಸಿದರು.
ಕೊರೋನ ವೈರಸ್ ಪಿಡುಗಿನ ಈ ಸಂಕೀರ್ಣ ಸಮಯದಲ್ಲಿ ಜನರು ತಾವಿರುವಲ್ಲೇ ಉಳಿದುಕೊಳ್ಳುವಂತೆ ಮಾಡಲು ಸಾಧ್ಯವಿದ್ದಷ್ಟು ಶ್ರಮಿಸುವುದು ಅಗತ್ಯವಾಗಿದೆ. ಆದರೆ ಜನರು ತಮ್ಮ ಮನೆ (ಊರು)ಗಳಿಗೆ ಹೋಗಬೇಕೆಂದು ಬಯಸಿದ್ದರೆ, ಮಾನವೀಯ ನೆಲೆಯಿಂದ ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಈ ಮಾರಕ ಸೋಂಕು ರೋಗವು ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳುವುದು ಅತಿ ದೊಡ್ಡ ಸವಾಲಾಗಿದೆಯೆಂದು ಪ್ರಧಾನಿ ತಿಳಿಸಿದರು.
ಮುಖ್ಯಮಂತ್ರಿಗಳ ಜೊತೆ ಮಧ್ಯಾಹ್ನ ಮೂರು ಗಂಟೆಯಿಂದ, ಸುಮಾರು 7:00 ಗಂಟೆಯವರೆಗೆ ಪ್ರಧಾನಿ ಮಾತುಕತೆ ನಡೆಸಿದರು.ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ಜೊತೆ ಕೇಂದ್ರ ಗೃಹಸಚಿವ ಅಮಿತ್‌ಶಾ, ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ , ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,ರಸ್ತೆ ಸಾರಿಗೆ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.







