ಕಾರ್ಮಿಕರನ್ನು ಅರ್ಧದಾರಿಯಲ್ಲಿ ಬಿಟ್ಟು ಹೋಗುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಉಡುಪಿ ಡಿಸಿ ಎಚ್ಚರಿಕೆ

ಉಡುಪಿ, ಮೇ 12: ಕಟ್ಟಡ ಕಾಮಗಾರಿ ಸಹಿತ ವಿವಿಧ ಕೆಲಸಗಳಿಗಾಗಿ ಕಾರ್ಮಿಕರನ್ನು ಕರೆದುಕೊಂಡು ಬಂದು, ಈಗ ಅವರನ್ನು ಅಮಾನವೀಯವಾಗಿ ಅರ್ಧದಾರಿಯಲ್ಲಿ ಬಿಟ್ಟು ಹೋಗುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಈ ಸಂಬಂಧ ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಹೊರರಾಜ್ಯ ಹಾಗೂ ಜಿಲ್ಲೆಗಳ ವಲಸೆ ಕಾರ್ಮಿಕರಿದ್ದು, ಇವರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 7000ಕ್ಕೂ ಅಧಿಕ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆದುಕೊಂಡು ಬಂದಿರುವ ಗುತ್ತಿಗೆದಾರರು ಯಾವುದೇ ಕರುಣೆ ಇಲ್ಲದೆ ಕೆಲವು ಕಾರ್ಮಿಕ ರನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಕಾರ್ಮಿಕರನ್ನು ಕರೆದುಕೊಂಡ ಬಂದಿರುವ ಗುತ್ತಿಗೆದಾರರು ಅಥವಾ ಮೆಸ್ತ್ರೀಗಳೇ ಸರಿಯಾದ ವ್ಯವಸ್ಥೆ ಮಾಡಿ ಅವರನ್ನು ಊರಿಗೆ ಕಳುಹಿಸುವ ಕೆಲಸ ಮಾಡಬೇಕು ಮತ್ತು ಊಟ ತಿಂಡಿ ನೀಡಬೇಕು. ಈ ಮೂಲಕ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







