ಏರ್ ಇಂಡಿಯಾ ಸಿಬ್ಬಂದಿಗೆ ಕೊರೋನ ಸೋಂಕು, ದಿಲ್ಲಿಯ ಮುಖ್ಯ ಕಚೇರಿ ಎರಡು ದಿನ ಬಂದ್

ಹೊಸದಿಲ್ಲಿ, ಮೇ 12: ಏರ್ ಇಂಡಿಯಾದ ಸಿಬ್ಬಂದಿಯೊಬ್ಬರಿಗೆ ಕೊರೋನವೈರಸ್ ಸೋಂಕು ತಗಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಏರ್ ಇಂಡಿಯಾದ ದಿಲ್ಲಿಯ ಮುಖ್ಯ ಕಚೇರಿಯನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ. ಚೇರ್ಮನ್ ಹಾಗೂ ಆಡಳಿತ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಸಹಿತ ಪ್ರತಿಯೊಬ್ಬರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಕಚೇರಿಯನ್ನು ಸಂಪೂರ್ಣವನ್ನು ಸ್ವಚ್ಛಗೊಳಿಸಲಾಗಿದೆ. ಏರ್ ಇಂಡಿಯಾ ತನ್ನ ಉದ್ಯೋಗಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಶಿಷ್ಟಾಚಾರವನ್ನು ಪಾಲಿಸಲು ಎರಡು ದಿನಗಳ ಕಾಲ ಕಚೇರಿಯನ್ನು ಬಂದ್ ಮಾಡಲಾಗಿದೆ. ಉದ್ಯೋಗಿಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಏರ್‌ಲೈನ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ವ್ಯಕ್ತಿಯನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ನಿನ್ನೆ ಏರ್ ಇಂಡಿಯಾದ ಐದು ಪೈಲಟ್‌ಗಳಿಗೆ ಕೊರೊನ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಕಳಪೆ ಟೆಸ್ಟ್ ಕಿಟ್‌ಗಳಿಂದಾಗಿ ಈ ಮೊದಲು ಬೋಯಿಂಗ್ 787 ಡ್ರೀಮ್‌ಲೈನರ್‌ನ ಎಲ್ಲ ಪೈಲಟ್‌ಗಳ ಕೊರೋನ ಪರೀಕ್ಷೆ ವರದಿಯು ಪಾಸಿಟಿವ್ ಎಂದು ತಪ್ಪು ವರದಿ ಬಂದಿತ್ತು. ಪರೀಕ್ಷೆಯ ನಿಖರತೆ ಬಗ್ಗೆ ಸಂಶಯ ಬಂದ ಬಳಿಕ ಮರು ಪರೀಕ್ಷೆ ನಡೆಸಲಾಗಿತ್ತು. ಟೆಕ್ನಿಶಿಯನ್ ಹಾಗೂ ಚಾಲಕನ ವರದಿಯೂ ಪಾಸಿಟಿವ್ ಆಗಿದೆ.ಈ ಇಬ್ಬರನ್ನು ಮರು ಪರೀಕ್ಷೆಗೆ ಒಳಪಡಿಸಲಾಗುತ್ತದೆಯೇ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಈ ಇಬ್ಬರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.







