ಮುಂಬೈಯಿಂದ ಬರುತ್ತಿದ್ದ ಟಿಟಿ ವಾಹನ ಬೆಂಕಿಗಾಹುತಿ: ಕುಂದಾಪುರದ 11 ಮಂದಿ ಅಪಾಯದಿಂದ ಪಾರು

ಕುಂದಾಪುರ, ಮೇ 12: ಸೇವಾಸಿಂಧು ಮೂಲಕ ಪಾಸ್ ಪಡೆದು ಮುಂಬೈ ಯಿಂದ ಕುಂದಾಪುರಕ್ಕೆ ಬರುತ್ತಿದ್ದ ಟೆಂಪೋ ಟ್ರಾವೆಲ್ಲರ್ ವಾಹನವು ಮೇ 11 ರಂದು ಸಂಜೆ ವೇಳೆ ಮಹಾರಾಷ್ಟ್ರದ ಲೋನೋವಾಲಾ ಎಂಬಲ್ಲಿ ಬೆಂಕಿಗೆ ಅಹುತಿಯಾಗಿದ್ದು, ಇದರಲ್ಲಿದ್ದ ಕುಂದಾಪುರ ಮೂಲದ 11 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.
ಮುಂಬೈಯ ಭಾಂಡುಪ್ ಎಂಬಲ್ಲಿ ನೆಲೆಸಿರುವ ಕುಂದಾಪುರ ಆಲೂರು ಮೂಲದ ಕೇಶವ ಪೂಜಾರಿ ಎಂಬವರ ಕುಟುಂಬದ 11 ಮಂದಿ ಸೇವಾ ಸಿಂಧು ಮೂಲಕ ಉಡುಪಿ ಜಿಲ್ಲೆಗೆ ಪ್ರವೇಶದ ಅನುಮತಿ ಪಡೆದಿದ್ದು, ಅದರಂತೆ ಮೇ 11ರಂದು ಭಾಂಡುಪ್‌ನಿಂದ ಟೆಂಪೋ ಟ್ರಾವೆಲ್ಲರ್‌ನಲ್ಲಿ ಊರಿಗೆ ಹೊರಟಿದ್ದರು.
ಲೋನಾವಾಲಾದಲ್ಲಿ ಬರುತ್ತಿದ್ದಂತೆ ವಾಹನದೊಳಗೆ ಬೆಂಕಿ ಕಾಣಿಸಿ ಕೊಂಡಿತ್ತೆನ್ನಲಾಗಿದೆ. ಕೂಡಲೇ ವಾಹನವನ್ನು ರಸ್ತೆ ಬದಿ ನಿಲ್ಲಿಸಿದ ಚಾಲಕ, ಎಲ್ಲರನ್ನು ಇಳಿಸಿ ದೂರ ಕಳುಹಿಸಿದ ಎನ್ನಲಾಗಿದೆ. ಕ್ಷಣ ಮಾತ್ರದಲ್ಲಿ ಇಡೀ ವಾಹನಕ್ಕೆ ಬೆಂಕಿ ಆವರಿಸಿತು. ನಂತರ ಇಡೀ ವಾಹನ ಬೆಂಕಿಯಿಂದ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.
ವಾಹನ ನಿರಂತ ಮೂರುವರೆ ಗಂಟೆ ಸಂಚರಿಸಿದ ಪರಿಣಾಮ ಎಂಜಿನ್ ಬಿಸಿಯಾಗಿ ಈ ಅವಘಡ ಸಂಭವಿಸಿದ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಜನ ಆಗಿದ್ದುದರಿಂದ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಪ್ರಯಾಣ ಮುಂದುವರೆಸಲು ವಾಹನ ಇಲ್ಲದೆ ದಾರಿ ಮಧ್ಯೆ ಅತಂತ್ರರಾದ ಕುಟುಂಬ, ನೇರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಪ್ರಕಾಶ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದೆ.
ತಕ್ಷಣವೇ ಸ್ಪಂದಿಸಿದ ಸಚಿವರು ಸ್ಥಳೀಯ ಸಂಘಟನೆಗಳ ಮುಖಂಡರಿಗೆ ಕರೆ ಮಾಡಿ ನೆರವಾಗುವಂತೆ ಕೋರಿಕೊಂಡರು. ಅದರಂತೆ ಸ್ಥಳೀಯ ಪೊಲೀಸರ ಸಹಕಾರದಿಂದ ಆ ಕುಟುಂಬವನ್ನು ನಿಪ್ಪಾಣಿಯವರೆಗೆ ಬಿಡಲಾಯಿತು. ಅಲ್ಲಿಂದ ಸಚಿವರು ವ್ಯವಸ್ಥೆ ಮಾಡಿರುವ ವಾಹನದಲ್ಲಿ ಕುಟುಂಬ ಊರಿಗೆ ಪ್ರಯಾಣ ಬೆಳೆಸಿ, ತಲುಪಿದೆ ಎಂದು ಮೂಲಗಳು ತಿಳಿಸಿವೆ.







