ಉಡುಪಿ: ಕುಕ್ಕೆಹಳ್ಳಿ ರಸ್ತೆ ಬದಿ ಕಾಡುಕೋಣ ಪ್ರತ್ಯಕ್ಷ !

ಉಡುಪಿ, ಮೇ 12: ಹೆಬ್ರಿ ವಲಯ ವ್ಯಾಪ್ತಿಯ ಕುಕ್ಕೆಹಳ್ಳಿ ಮೀಸಲು ಅರಣ್ಯದ ಸಮೀಪದ ಕುಕ್ಕೆಹಳ್ಳಿ- ಪೆರ್ಡೂರು ರಸ್ತೆಯಲ್ಲಿ ಕಾಡುಕೋಣವೊಂದು ಮೇ 11ರಂದು ಬೆಳಗ್ಗೆ ಪ್ರತ್ಯಕ್ಷವಾಗಿದ್ದು, ಕೆಲವೇ ನಿಮಿಷಗಳಲ್ಲಿ ಅದು ಅರಣ್ಯ ದೊಳಗೆ ಓಡಿ ಹೋಗಿರುವ ಬಗ್ಗೆ ವರದಿಯಾಗಿದೆ.
ಕುಕ್ಕೆಹಳ್ಳಿ ಮೀಸಲು ಅರಣ್ಯದಲ್ಲಿ ಎರಡು ಮೂರು ಕಾಡುಕೋಣಗಳಿದ್ದು, ಅವುಗಳ ಪೈಕಿ ಒಂದು ಕಾಡುಕೋಣ ಅಕಸ್ಮಿಕವಾಗಿ ಅರಣ್ಯದಿಂದ ಹೊರ ಬಂದು ಕುಕ್ಕೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಸಾಗಿದೆ. ಈ ಬಗ್ಗೆ ಗಮನಿಸಿದ ಸ್ಥಳೀಯರು ಕೂಡಲೇ ಅದನ್ನು ಅಲ್ಲಿಂದ ಓಡಿಸಿದ್ದಾರೆ. ನಾಯಿಗಳು ಕೂಡ ಕೋಣವನ್ನು ಬೆನ್ನಟ್ಟಿದೆ. ಇದರಿಂದ ಬೆದರಿದ ಕಾಡುಕೋಣ ಕೂಡಲೇ ಅರಣ್ಯದೊಳಗೆ ಸೇರಿಕೊಂಡಿದೆ ಎಂದು ತಿಳಿದುಬಂದಿದೆ.
‘ಕುಕ್ಕೆಹಳ್ಳಿಯಲ್ಲಿ ಕಾಡುಕೋಣ ಸಾಮಾನ್ಯವಾಗಿ ಕಂಡುಬರುತ್ತಿದೆ. ಮೀಸಲು ಅರಣ್ಯದಲ್ಲಿ ಎರಡು ಮೂರು ಕೋಣಗಳಿರುವ ಮಾಹಿತಿ ಇದೆ. ಮೇ 11 ರಂದು ಒಂದು ಕೋಣ ದಾರಿ ತಪ್ಪಿ ರಸ್ತೆಗೆ ಬಂದಿದೆ. ಕೂಡಲೇ ಅದು ಅರಣ್ಯ ವನ್ನು ಸೇರಿಕೊಂಡಿದೆ. ಯಾರಿಗೂ ಯಾವುದೇ ತೊಂದರೆ ಮಾಡಿಲ್ಲ. ಮೇ 10 ರಂದು ಇದೇ ಅರಣ್ಯದಲ್ಲಿ ಒಂದು ಕಾಡುಕೋಣ ನಮ್ಮ ಸಿಬ್ಬಂದಿಗೆ ಕಾಣಲು ಸಿಕ್ಕಿದೆ’ ಎಂದು ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜು ತಿಳಿಸಿದ್ದಾರೆ.





