ರೈತ-ಕಾರ್ಮಿಕರಿಗೆ ಮಾರಕವಾಗಿರುವ ಕಾಯ್ದೆಗಳ ತಿದ್ದುಪಡಿ ಕೈಬಿಡಿ: ಕುಮಾರಸ್ವಾಮಿ ಆಗ್ರಹ

ಬೆಂಗಳೂರು, ಮೇ 12: ರೈತರು ಮತ್ತು ಕಾರ್ಮಿಕರ ಬದುಕಿಗೆ ಮಾರಕವಾಗಿರುವ ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹೊರಡಿಸುವುದನ್ನು ರಾಜ್ಯ ಸರಕಾರ ಕೂಡಲೇ ಕೈಬಿಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಖರೀದಿಸಲು ಅವಕಾಶ ನೀಡುವ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರದ ನಿರ್ದೇಶನದಂತೆ ರಾಜ್ಯ ಸರಕಾರ ಮುಂದಾಗಿದ್ದು, ಇದರಿಂದ ರಾಜ್ಯದಲ್ಲಿ ಎಪಿಎಂಸಿಗಳು ಮುಚ್ಚಲಿವೆ ಎಂದು ಎಚ್ಚರಿಸಿದರು.
ರಾಜ್ಯ ಸರಕಾರ ತರಾತುರಿಯಲ್ಲಿ ಸುಗ್ರಿವಾಜ್ಞೆ ತರುವ ಅಗತ್ಯವೇನಿದೆ? ಬಹಳ ತುರ್ತು ಎನಿಸಿದರೆ ಕೂಡಲೇ ವಿಧಾನ ಮಂಡಲ ಅಧಿವೇಶನ ಕರೆಯಲಿ. ಅದು ಬಿಟ್ಟು ಉಳ್ಳವರನ್ನು ತೃಪ್ತಿ ಪಡಿಸಲು ಹಾಗೂ ಕೆಲ ದೊಡ್ಡ ದೊಡ್ಡ ಕಂಪೆನಿಗಳಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರಕಾರ ಸುಗ್ರೀವಾಜ್ಞೆ ತರಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಕುಮಾರಸ್ವಾಮಿ, ಕೃಷಿ ಉತ್ಪನ್ನಗಳಿಗ ಬೆಲೆ ನಿಗದಿಪಡಿಸುವವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.
ಕಾರ್ಮಿಕರ ಕೆಲಸ ಅವಧಿಯನ್ನು 8ರಿಂದ 12ಗಂಟೆಗೆ ಹೆಚ್ಚಳ ಮಾಡುವ ಸಂಬಂಧ ಕಾರ್ಮಿಕ ಕಾಯ್ದೆಗೆ ಸುಗ್ರೀವಾಜ್ಞೆ ತರಲು ರಾಜ್ಯ ಸರಕಾರ ಮುಂದಾಗಿದೆ. ಆದರೆ, ರಾಜ್ಯದ ಕಾರ್ಮಿಕರಿಗೆ 12ಗಂಟೆ ಕೆಲಸ ಮಾಡುವ ಸಾಮರ್ಥ್ಯವಿದೆಯೇ ಎಂದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ಕಾಯ್ದೆಗೆ ತಿದ್ದುಪಡಿ ತಂದರೆ ಜನರು ಪ್ರತಿಭಟನೆ ಮಾಡುವುದಿಲ್ಲ ಎಂಬ ಉದ್ಧಟತನವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರೋನ ಸಂಕಷ್ಟದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುವ ಭೀತಿಯಲ್ಲಿವೆ. ಜಿಎಸ್ಪಿ ತಂದಾಗಲೇ ಅವು ಸಂಕಷ್ಟಕ್ಕೆ ಸಿಲುಕಿದ್ದವು. ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದ್ದರೆ ತಕ್ಷಣವೆ ಅಧಿವೇಶನ ಕರೆಯಬೇಕು. ಅದಕ್ಕೂ ಮೊದಲು ಕಾರ್ಮಿಕರು ಮತ್ತು ಮಾಲಕರ ಜತೆ ಚರ್ಚೆ ನಡೆಸಲಿ ಎಂದರು.
ಮೇಲ್ಕಂಡ ಎರಡು ಸುಗ್ರೀವಾಜ್ಞೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಪತ್ರ ಬರೆಯಲಿದ್ದು, ತಮ್ಮ ವಿವೇಚನೆಯ ಅನುಸಾರ ತೀರ್ಮಾನ ಮಾಡಿ ಎಂದು ಕೋರಲಾಗುವುದು ಎಂದ ಅವರು, ರೈತ ಮತ್ತು ಕಾರ್ಮಿಕ ವಿರೋಧಿ ಎರಡು ಸುಗ್ರೀವಾಜ್ಞೆ ತರಲು ತೀರ್ಮಾನದಿಂದ ರಾಜ್ಯ ಸರಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ದಿನಕ್ಕೊಂದು ನಿಯಮ
ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಪ್ರತಿದಿನ ಒಂದೊಂದು ನಿಯಮ ಕೈಗೊಂಡು ಜನರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಶ್ರಮಿಕರಿಗೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದು ಕೇವಲ ಘೋಷಣೆಗೆ ಸೀಮಿತವಾಗದೆ ಬಡವರಿಗೆ ಅನುಕೂಲ ಆಗಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.







