ಕೊರೋನ ಹೆಚ್ಚಲು ಕೇಂದ್ರದ ವೈಫಲ್ಯ ಕಾರಣವೇ ಹೊರತು ತಬ್ಲೀಗಿ ಜಮಾಅತ್ ಅಲ್ಲ: ಸಿದ್ದರಾಮಯ್ಯ

ಬೆಂಗಳೂರು, ಮೇ 12: ದೇಶದಲ್ಲಿ ಕೊರೋನ ಸೋಂಕು ಹೆಚ್ಚಾಗಿರುವುದಕ್ಕೆ ಕೇಂದ್ರ ಸರಕಾರದ ವೈಫಲ್ಯ ಕಾರಣವೇ ಹೊರತು, ತಬ್ಲಿಗಿ ಜಮಾಅತ್ ಸಮ್ಮೇಳನವಾಗಲಿ, ಒಂದು ಸಮುದಾಯದ ಜನರಾಗಲಿ ಅಲ್ಲ. ಇಟಲಿ, ಅಮೆರಿಕದಂತಹ ದೇಶಗಳು ಕೊರೋನ ಇಂದ ತತ್ತರಿಸಿ ಹೋಗಿವೆ, ಅಲ್ಲಿ ಜಮಾಅತ್ ಸಮ್ಮೇಳನಗಳು ನಡೆದಿತ್ತೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಮಂಗಳವಾರ ನಗರದ ಕ್ವೀನ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವದಾದ್ಯಂತ ಕೊರೋನ ಹರಡುತ್ತಿದ್ದ ಸಂದರ್ಭದಲ್ಲೇ ನಮ್ಮ ದೇಶದಿಂದ ಹೊರಹೋಗುವ ಮತ್ತು ಒಳ ಬರುವ ವಿಮಾನಯಾನವನ್ನು ಬಂದ್ ಮಾಡಿದ್ದರೆ ಇಂತಹ ಸಂಕಷ್ಟದ ದಿನಗಳನ್ನು ದೇಶದ ಜನ ಎದುರಿಸಬೇಕಾದ ಪರಿಸ್ಥಿತಿ ಉದ್ಭವವೇ ಆಗುತ್ತಿರಲಿಲ್ಲ ಎಂದರು.
ಕೊರೋನ ನಮ್ಮ ದೇಶದಲ್ಲಿ ಕಾಣಿಸಿಕೊಂಡ ನಂತರವೂ ತಬ್ಲೀಗಿ ಜಮಾಅತ್ ಸಮಾವೇಶಕ್ಕೆ ಅನುಮತಿ ನೀಡಿದ್ದು ಯಾರು? ಮತ್ತು ಏಕೆ? ದಿಲ್ಲಿ ಪೊಲೀಸ್ ಇಲಾಖೆ ಯಾರ ಅಧೀನದಲ್ಲಿದೆ? ಕೋಮುವಾದಿಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಕೇಂದ್ರ ಸರಕಾರ ಇದರ ಹೊಣೆ ಹೊರಬೇಕು. ಇದಕ್ಕೆ ಆರೆಸ್ಸೆಸ್ ರಾಜಕೀಯ ಬಣ್ಣ ಕೊಡುವ ಹುನ್ನಾರ ನಡೆಸಿದೆ ಎಂದು ಅವರು ದೂರಿದರು.
ಪೂರ್ವ ಸಿದ್ಧತೆ ಇಲ್ಲದೆ ಲಾಕ್‍ಡೌನ್ ಹೇರಿದ್ದರಿಂದ ಇಂದು ಕೋಟ್ಯಂತರ ಮಂದಿ ಕಾರ್ಮಿಕರು ಇತ್ತ ಆಹಾರ, ವಸತಿಯೂ ಇಲ್ಲದೆ, ಸ್ವಂತ ಊರುಗಳಿಗೂ ತೆರಳಲು ಸಾಧ್ಯವಾಗದೆ ನರಳುವಂತಾಗಿದೆ. ಕನಿಷ್ಠ ಎರಡು-ಮೂರು ದಿನ ಸಮಯಾವಕಾಶ ನೀಡಿದ್ದರೂ ನಗರಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಕಾರ್ಮಿಕರು ತಮ್ಮ ಊರುಗಳಿಗಾದರೂ ಹೋಗಿರುತ್ತಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಈಗಲೂ ವಲಸೆ ಕಾರ್ಮಿಕರಿಗೆ ಊರಿಗೆ ಮರಳಲು ಸೂಕ್ತ ವ್ಯವಸ್ಥೆಯಿಲ್ಲ. 5.50 ಲಕ್ಷ ಮಂದಿ ವಲಸೆ ಕಾರ್ಮಿಕರು ತವರಿಗೆ ಮರಳಲು ಅನುಮತಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 60 ಸಾವಿರ ಮಂದಿಗಷ್ಟೆ ಅನುಮತಿ ನೀಡಲಾಗಿದೆ. ಇವರೆಲ್ಲ ದುಡಿಮೆಯೂ ಇಲ್ಲದೆ, ಮನೆಗೂ ಮರಳಲಾಗದೆ ನರಳುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈವರೆಗೂ ಪಿಎಂ ಕೇರ್ಸ್‍ಗೆ ಅಂದಾಜು 35 ಸಾವಿರ ಕೋಟಿ ರೂ.ಸಂಗ್ರಹವಾಗಿದೆ. ನಮ್ಮ ರಾಜ್ಯದಿಂದಲೇ ಕನಿಷ್ಠ 3000 ಕೋಟಿ ರೂ.ನೀಡಲಾಗಿದೆ. ಜನರು ನೀಡಿದ ಹಣದಲ್ಲಿ ಬಡ ಕಾರ್ಮಿಕರಿಗಾಗಿ ಖರ್ಚು ಮಾಡಲು ಸರಕಾರ ಮೀನಾಮೇಷ ಎಣಿಸುತ್ತಿರುವುದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
15ನೆ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ 5,495 ಕೋಟಿ ರೂ. ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ, ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆ ಹಣ ಬಿಡುಗಡೆ ಮಾಡದೆ ರಾಜ್ಯಕ್ಕೆ ದ್ರೋಹ ಮಾಡಿದ್ದಾರೆ ಎಂದು ಅವರು ಕಿಡಿಗಾರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯ ಸರಕಾರ ಕೊರೋನ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಒತ್ತಡಕ್ಕೆ ಮಣಿದು ಒಂದಷ್ಟು ಕೆಲಸ ಮಾಡಿದೆ. ಆದರೆ, ಹಲವು ಕಾರ್ಯಕ್ರಮಗಳ ವಿಚಾರದಲ್ಲಿ ಅವರ ಮಾತಿಗೆ ಅವರೇ ಬದ್ಧರಾಗಿಲ್ಲ. ಸರಕಾರವೆ ಗೊಂದಲದಲ್ಲಿ ಮುಳುಗಿದೆ. ಸರಕಾರ ಕೂಡಲೇ ಇದುವರೆಗೂ ಯಾವುದಕ್ಕಾಗಿ, ಎಷ್ಟು ಹಣ ವೆಚ್ಚ ಮಾಡಲಾಗಿದೆ ಎಂಬ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ವಲಸೆ ಕಾರ್ಮಿಕರಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸದ ಕಾರಣಕ್ಕೆ, ಕನಿಷ್ಠ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡದ ಕಾರಣ ಅವರೆಲ್ಲ ರಾಜ್ಯ ಬಿಟ್ಟು ಹೋಗುತ್ತಿದ್ದಾರೆ. ಹಿಂದಿರುಗಲು ಸಾಕಷ್ಟು ಜನ ನೋಂದಣಿ ಮಾಡಿಕೊಂಡಿದ್ದಾರೆ. ಕನಿಷ್ಠ ಸೌಕರ್ಯ ಕಲ್ಪಿಸಿದ್ದರೆ ಅವರು ರಾಜ್ಯ ಬಿಟ್ಟು ಹೋಗುತ್ತಿರಲಿಲ್ಲ ಎಂದು ಹೇಳಿದರು.
ಕಾರ್ಮಿಕರು ತಮ್ಮ ಶ್ರಮದಾನದ ಮೂಲಕ ಈ ದೇಶವನ್ನು ಕಟ್ಟಲು ಕೊಡುಗೆ ನೀಡಿದ್ದಾರೆ. ಕೊರೋನ, ಲಾಕ್‍ಡೌನ್ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ ಅವರಿಗೆ ರಾಜ್ಯ ಸರಕಾರ ಊಟ, ನೀರಿನ ವ್ಯವಸ್ಥೆಯನ್ನೂ ಮಾಡಲಿಲ್ಲ. ಬದಲಿಗೆ ಬಿಜೆಪಿ ಕಾರ್ಯಕರ್ತರಿಗೆ ಎಲ್ಲವನ್ನೂ ನೀಡಿದ್ದಾರೆ. ಬೇಕಿದ್ದರೆ ಅದನ್ನು ಸಾಕ್ಷಿ ಸಮೇತ ನಿರೂಪಿಸುತ್ತೇನೆ ಎಂದು ಅವರು ಡಿಕೆಶಿ ಸವಾಲು ಹಾಕಿದರು.
ನಮ್ಮ ರಾಜ್ಯದಿಂದ 25 ಜನ ಬಿಜೆಪಿ ಸದಸ್ಯರು ಗೆದ್ದಿದ್ದಾರೆ. ಅವರ ಕಾರ್ಯವೈಖರಿ ಏನು ಅನ್ನೋದು ಈಗ ಗೊತ್ತಾಗಿದೆ. ರಾಜ್ಯಕ್ಕೆ ಪದೇ ಪದೇ ಮಲತಾಯಿ ಧೋರಣೆ ಕೇಂದ್ರ ತಾಳುತ್ತಿದೆ. ಕೋವಿಡ್‍ಗೆ ಹಣ ಬಿಡುಗಡೆ ಎಂದು ಹೇಳುತ್ತಾರೆ. ಹಣಕಾಸು ಆಯೋಗಕ್ಕೂ ಕೋವಿಡ್‍ಗೂ ಏನು ಸಂಬಂಧ. 13 ರಾಜ್ಯಗಳಿಗೆ ಹಣ ಬಿಡುಗಡೆ ಮಾಡುತ್ತಾರೆ. ನಮ್ಮ ರಾಜ್ಯಕ್ಕೆ ಯಾವುದೆ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಮ್ ಅಹ್ಮದ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಎಚ್ಚರಿಕೆ
ಗ್ರಾಮ ಪಂಚಾಯತ್ ಗಳಿಗೆ ಬಿಜೆಪಿ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ನಿರ್ಧಾರದಿಂದ ಸರಕಾರ ಹಿಂದೆ ಸರಿಯದಿದ್ದರೆ ಲಾಕ್‍ಡೌನ್ ಇದ್ದರೂ ನಾವು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. ಈಗಿರುವ ಸದಸ್ಯರ ಕಾಲಾವಧಿಯನ್ನೆ ಮುಂದೂಡಿ, ಮುಂದಿನ 6 ತಿಂಗಳೊಳಗೆ ಚುನಾವಣೆ ನಡೆಸಲಿ.
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ







