ಎನ್‌ಐಟಿಕೆಯಿಂದ ಮರುಬಳಕೆ ಮಾಡಬಹುದಾದ ಮುಖ ಕವಚ ತಯಾರಿ

ಮಂಗಳೂರು, ಮೇ 12: ಮಾಸ್ಕ್, ಪಿಪಿಇ ಕಿಟ್‌ಗಳು ಮತ್ತು ಪಾರದರ್ಶಕ ಮುಖಕವಚಗಳ ಲಭ್ಯತೆ ಇಲ್ಲದಿರುವುದು ಮತ್ತು ಲಭ್ಯವಿರುವ ಸಲಕರಣೆಗಳು ಮಾರುಕಟ್ಟೆಯಲ್ಲಿ 10ರಿಂದ 15 ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ಜನಸಾಮಾನ್ಯರ ಕೈಗೆಟಕುತ್ತಿಲ್ಲ. ಕಾರ್ಖಾನೆಗಳು ಸಂಪೂರ್ಣವಾಗಿ ಲಾಕ್‌ಡೌನ್ ಆಗಿರುವುದರಿಂದ ಬೇಡಿಕೆಗೆ ತಕ್ಕಂತೆ ಈ ಆರೋಗ್ಯ ರಕ್ಷಣಾತ್ಮಕ ಸಲಕರಣೆಗಳು ಉತ್ದಾದನೆಯಾಗದೆ ಸೋಂಕಿತರೊಂದಿಗೆ ನೇರವಾಗಿ ವ್ಯವಹರಿಸುವ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಅಪಾಯದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
ಇದರಿಂದ ಕೋವಿಡ್-19 ವೇಗವಾಗಿ ಹರಡುವ ಸಾಧ್ಯತೆಯೂ ಇದೆ. ಇದನ್ನು ಮನಗಂಡ ಸುರತ್ಕಲ್ ಎನ್‌ಐಟಿಕೆಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಅರುಣ್ ಇಸ್ಲೂರ್ ಸ್ಥಳೀಯವಾಗಿ ಲಭ್ಯವಿರುವ ಕಡಿಮೆ ವೆಚ್ಚದ ವಸ್ತುಗಳನ್ನು ಬಳಸಿಕೊಂಡು ಮರುಬಳಕೆ ಮಾಡಬಹುದಾದ ಪಾರದರ್ಶಕ ಮುಖಕವಚವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮುಖಕವಚದ ಬೆಲೆ ಕೇವಲ 12 ರೂ. ಅಗಿದೆ. ಈ ಮುಖ ಕವಚವನ್ನು ಸೋಪ್ ನೀರು ಅಥವಾ 4 ರಿಂದ 5 ಹನಿ ಸ್ಯಾನಿಟೈಸರ್‌ಗಳನ್ನು ಸುಮಾರು 100 ದಿನಗಳವರೆಗೆ ಬಳಸಬಹುದಾಗಿದೆ. ಮೊದಲ ಹಂತದಲ್ಲಿ 300 ಮುಖಕವಚಗಳನ್ನು ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕ ಪ್ರೊ. ಉಮಾಮಹೇಶ್ವರ ರಾವ್ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಇತ್ತೀಚೆಗೆ ಹಸ್ತಾಂತರಿಸಿದರು.
ಈ ಸಂದರ್ಭ ದ.ಕ. ಜಿಲ್ಲಾ ಉಪ ಔಷಧ ನಿಯಂತ್ರಕ ರಮಾಕಾಂತ್, ಹೆಚ್ಚುವರಿ ಔಷಧ ನಿಯಂತ್ರಕ ಶಂಕರ ನಾಯ್ಕಾ, ಎನ್‌ಐಟಿಕೆ ಸುರತ್ಕಲ್‌ನ ಕುಲಸಚಿವ ರವೀಂದ್ರನಾಥ್, ಡೀನ್ ಪ್ರೊ.ಎಂ ಎಸ್ ಭಟ್, ಜಂಟಿ ಕುಲಸಚಿವ ವೈ. ರಾಮಮೋಹನ್, ಡಾ. ಲಕ್ಷ್ಮಿ, ಸಂಶೋಧನಾ ವಿದ್ಯಾರ್ಥಿ ಹಾಗೂ ಸ್ವಯಂ ಸೇವಕರಾದ ಪ್ರವೀಣ್ ಮತ್ತು ಸೈಯದ್ ಇಬ್ರಾಹೀಂ ಉಪಸ್ಥಿತರಿದ್ದರು.







