ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ರೈತರ ಪಾಲಿಗೆ ಮಾರಕ: ಸಿದ್ದರಾಮಯ್ಯ

ಬೆಂಗಳೂರು, ಮೇ 12: ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದ್ದು, ಇದು ರೈತರ ಪಾಲಿಗೆ ಮಾರಕವೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ಯಾರು ಕೇಳುವವರಿಲ್ಲವೆಂದು ರೈತ ಸಮುದಾಯ ಕಂಗಾಲಾಗಿದೆ. ಈ ಸಂದರ್ಭದಲ್ಲಿ ಕಾಯ್ದಿಗೆ ತಿದ್ದುಪಡಿ ತರಲು ಹೊರಟಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಎಂದು ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆದ ತರಕಾರಿ, ಹೂ, ಭತ್ತ, ಜೋಳ, ಮೆಕ್ಕೆ ಜೋಳ, ಈರುಳ್ಳಿ, ತೊಗರಿ ಸೇರಿದಂತೆ ಅನೇಕ ಬೆಳೆಗಳನ್ನು ಸರಕಾರ ಖರೀದಿ ಮಾಡುವವರಿಲ್ಲದೆ ಬೀದಿಗೆ ಸುರಿಯುತ್ತಿದ್ದಾರೆ. ಹಾಪ್‍ಕಾಮ್ಸ್, ಎಪಿಎಂಸಿ ಮೂಲಕ ರೈತರ ಬೆಳೆಗಳನ್ನು ಖರೀದಿ ಮಾಡುವ ಮೂಲಕ ಮಾರುಕಟ್ಟೆ ಕಲ್ಪಿಸಿಯೆಂದರೆ ರಾಜ್ಯ ಸರಕಾರ ಕೇಳುತ್ತಿಲ್ಲವೆಂದು ಅವರು ಆರೋಪಿಸಿದರು.
ಕೇಂದ್ರ ಸರಕಾರ ಮೇ 5ರಂದು ಎಲ್ಲ ರಾಜ್ಯಗಳಿಗೂ ಪತ್ರ ಬರೆದು ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಮಾದರಿ ಪತ್ರ ಕಳುಹಿಸಿ, ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿ ಎಂದು ಹೇಳಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದ್ದಾಗಿದೆ, ರಾಜ್ಯ ಸರಕಾರಗಳ ಮೇಲೆ ಈ ರೀತಿ ಸವಾರಿ ಮಾಡಲು ಬರುವುದಿಲ್ಲವೆಂದು ಅವರು ಅಭಿಪ್ರಾಯಿಸಿದ್ದಾರೆ.
ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರಕಾರ ಸುಗ್ರಿವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಇದರಿಂದ ರೈತರಿಗೆ ಭಾರಿ ಅನ್ಯಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ರೈತರಿಗೆ ಸಂಬಂಧಿಸಿದ ಕಾನೂನು ಮಾಡುವಾಗ ವಿಧಾನಸಭೆಯಲ್ಲಿ ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಏಕಾಏಕಿ ಆದೇಶ ಹೊರಡಿಸಿದರೆ ಹೇಗೆ. ಸಂವಿಧಾನದ ಪ್ರಕಾರ ಇದು ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯ. ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದ ವಿಷಯವನ್ನು ಕೇಂದ್ರ ಸರಕಾರ ಆಯಾ ರಾಜ್ಯಗಳಿಗೆ ಬಿಡಬೇಕು. ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಲು ಹೊರಟಿರುವುದಕ್ಕೆ ನಮ್ಮ ವಿರೋಧವಿದೆ. ಈ ಕುರಿತು ರೈತರ ಜತೆ ಹಾಗೂ ಸಂಸತ್‍ನಲ್ಲಿ ಚರ್ಚೆ ಆಗಬೇಕು. ಅಲ್ಲಿಯವರೆಗೂ ಸುಗ್ರಿವಾಜ್ಞೆಯನ್ನು ಹೊರಡಿಸಬಾರದು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ







