ವಲಸೆ ಕಾರ್ಮಿಕರಿಗೆ ಕೂಡಲೇ ಪ್ರಯಾಣ ವ್ಯವಸ್ಥೆ ಮಾಡುವಂತೆ ದಸಂಸ ಆಗ್ರಹ
ಉಡುಪಿ, ಮೇ 12: ಉಡುಪಿ ಜಿಲ್ಲೆಯಾದ್ಯಂತ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಕೂಡಲೇ ಅವರವರ ಊರುಗಳಿಗೆ ವಾಪಾಸ್ಸು ಹೋಗಲು ಪ್ರಯಾಣ ಸೌಕರ್ಯಗಳನ್ನು ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಇಲ್ಲಿ ಆಹಾರದ ವ್ಯವಸ್ಥೆ ಇಲ್ಲದೆ ಮೇ 11ರಂದು ಸಂಜೆ ಕಾಲ್ನಡಿಗೆಯಲ್ಲೇ ತಮ್ಮ ಊರಿಗೆ ಹೊರಟ ತೆಲಂಗಾಣ ಕಾರ್ಮಿಕರ ವಿಚಾರ ತಿಳಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ನಿಯೋಗ, ಮಣಿಪಾಲ ಪೋಲಿಸ್ ಠಾಣೆಗೆ ಭೇಟಿ ನೀಡಿ ಸಂತ್ರಸ್ಥರ ವಿಚಾರ ತಿಳಿದುಕೊಂಡಿತು.
ಅಲ್ಲಿಂದ ನೇರವಾಗಿ ಕಾರ್ಮಿಕರು ಉಳಿದುಕೊಂಡಿರುವ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ನಿಯೋಗ, ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ, ಅಲ್ಲೇ ಇದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾರ್ಮಿಕರ ಮುಂದಿನ ಪ್ರಯಾಣಕ್ಕೆ ಬೇಕಾದ ವ್ಯಸ್ಥೆಗೆ ಕಲ್ಪಿಸುವಂತೆ ಒತ್ತಾಯಿಸಿದೆ.
ಈ ನಿಯೋಗದಲ್ಲಿ ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಭಾಸ್ಕರ್ ಮಾಸ್ಟರ್, ಪ್ರೊ.ಫಣಿರಾಜ್, ಶಿವಾನಂದ ಬಿರ್ತಿ, ಪ್ರಶಾಂತ ಬಿರ್ತಿ ಮೊದಲಾದವರು ಹಾಜರಿದ್ದರು.







