ಕಾರ್ಮಿಕ ಕಾರ್ಯದರ್ಶಿ ವರ್ಗಾವಣೆಗೆ ಸಿಐಟಿಯು ಖಂಡನೆ
ಉಡುಪಿ, ಮೇ 12: ಕೋವಿಡ್ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಪರಿಣಾಮಕಾರಿ ಯಾಗಿ ಕಾರ್ಯನಿರ್ವಹಿಸಿದ್ದ ಕಾರ್ಮಿಕ ಇಲಾಖೆಯ ಪ್ರಧಾನ ಕಾಯದರ್ಶಿ ಮಣಿವಣ್ಣನ್ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿರುವುದನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.
ಕಾರ್ಮಿಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡುವ ಸಲುವಾಗಿ ಸುಗ್ರೀವಾಜ್ಞೆ ಹೊರಡಿಸುವ ತನ್ನ ಕೈಂಕರ್ಯಕ್ಕೆ ಅನುವುಗೊಳಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್ ಅವರಿಗೆ ಈ ಹೊಣೆಯನ್ನು ವಹಿಸಿದೆ. ರಾಜ್ಯದ ಕಾರ್ಮಿಕರ ಹಿತಕ್ಕಿಂತ ಕಾರ್ಪೋರೇಟ್ ಬಂಡವಾಳದ ಹಿತವೇ ರಾಜ್ಯ ಸರಕಾರಕ್ಕೆ ಮುಖ್ಯ ವಾಗಿದೆ ಎಂಬುದನ್ನು ಬಿಜೆಪಿ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ ಎಂದು ಸಿಐಟಿಯು ದೂರಿದೆ.
ಲಾಕ್‌ಡೌನ್ ಸಂತ್ರಸ್ತರಿಗೆ ಪರಿಹಾರವನ್ನು ಪರಿಣಾಮಕಾರಿಯಾಗಿ ಮುಂದು ವರಿಸಲು ಮಣಿವಣ್ಣನ್ ವರ್ಗಾವಣೆಯನ್ನು ಕೂಡಲೆ ರದ್ದುಪಡಿಸಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅವರನ್ನೇ ಮುಂದುವರಿಸ ಬೇಕೆಂದು ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶಂಕರ್ ಹಾಗೂ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸರಕಾರವನ್ನು ಒತ್ತಾಯಿಸಿದ್ದಾರೆ.





