ಕೋವಿಡ್-19 ಸವಾಲನ್ನು ಸಮರ್ಥವಾಗಿ ಎದುರಿಸಿದ ಹರ್ಯಾಣದ ಮುಸ್ಲಿಂ ಬಾಹುಳ್ಯದ ನೂಹ್ ಜಿಲ್ಲೆ
ದ್ವೇಷ ಹರಡದೆ ಒಗ್ಗಟ್ಟಾದ ಜನರು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮೇ 12: ಎಪ್ರಿಲ್ ಆರಂಭದಲ್ಲಿ ಅತಿ ಹೆಚ್ಚು ಕೊರೋನ ವೈರಸ್ ಪ್ರಕರಣಗಳನ್ನು ಹೊಂದಿದ್ದ ಹರ್ಯಾಣದ ನಾಲ್ಕು ಜಿಲ್ಲೆಗಳಲ್ಲಿ ಒಂದಾಗಿದ್ದ ನೂಹ್ ಜಿಲ್ಲೆಯು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಅದ್ಭುತ ಸಾಧನೆಯನ್ನು ಮಾಡಿದೆ.
ಹರ್ಯಾಣದ ಏಕೈಕ ಮುಸ್ಲಿಮ್ ಬಾಹುಳ್ಯದ ಜಿಲ್ಲೆಯಾಗಿರುವ ನೂಹ್ನ ಹಲವಾರು ನಿವಾಸಿಗಳು ಮಾರ್ಚ್ನಲ್ಲಿ ದಿಲ್ಲಿಯ ನಿಝಾಮುದ್ದೀನ್ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ನ ಸಮಾವೇಶದಲ್ಲಿ ಭಾಗವಹಿಸಿದ್ದರಿಂದ ಇಲ್ಲಿ ವೈರಸ್ ಹರಡುವಿಕೆ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತಾದರೂ ಕೋವಿಡ್-19 ಅನ್ನು ನಿಯಂತ್ರಿಸುವಲ್ಲಿ ಜಿಲ್ಲೆಯು ಯಶಸ್ವಿಯಾಗಿದೆ.
ಹರ್ಯಾಣ ಸರಕಾರದ ಆರೋಗ್ಯ ಇಲಾಖೆಯ ಮೇ 11ರ ಕೋವಿಡ್-19 ಬುಲೆಟಿನ್ನಂತೆ ಮೂರು ಜಿಲ್ಲೆಗಳನ್ನೊಂಡ ಮೇವಾತ್ ಪ್ರದೇಶದ ಭಾಗವಾಗಿರುವ ನೂಹ್ ಜಿಲ್ಲೆಯಲ್ಲಿ ಒಟ್ಟು 60 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಈ ಪೈಕಿ 57 ಜನರು ಗುಣಮುಖರಾಗಿದ್ದಾರೆ. ಕೇವಲ ಮೂರು ಪ್ರಕರಣಗಳು ಸಕ್ರಿಯವಾಗಿವೆ. ಯಾವುದೇ ಹೊಸ ಪ್ರಕರಣ ಅಥವಾ ಸಾವು ಜಿಲ್ಲೆಯಲ್ಲಿ ವರದಿಯಾಗಿಲ್ಲ,ಹೀಗಾಗಿ ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೋನ ವೈರಸ್ ಪಿಡುಗು ನಿಯಂತ್ರಣದಲ್ಲಿರುವಂತೆ ಕಂಡು ಬರುತ್ತಿದೆ. ಹರ್ಯಾಣ ರಾಜ್ಯದಲ್ಲಿ ಈವರೆಗೆ ಒಟ್ಟು 719 ಪ್ರಕರಣಗಳು ವರದಿಯಾಗಿದ್ದು,10 ಜನರು ಮೃತಪಟ್ಟಿದ್ದಾರೆ.
ಅಷ್ಟಕ್ಕೂ ಗಂಭೀರ ಸಾಮಾಜಿಕ ಮಿತಿಗಳ ಹೊರತಾಗಿಯೂ ನೂಹ್ ಜಿಲ್ಲೆ ವೈರಸ್ನ್ನು ನಿಯಂತ್ರಿಸಿದ್ದಾದರೂ ಹೇಗೆ?
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ರಾಜೀವ ಯಾದವ್ ಅವರು ನೂಹ್ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರವು ಈ ಪ್ರಶ್ನೆಗೆ ಭಾಗಶಃ ಉತ್ತರವನ್ನು ನೀಡುತ್ತದೆ. ನೂಹ್ ಹರ್ಯಾಣದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೊಂದಾಗಿದೆ ಮತ್ತು ನೀತಿ ಆಯೋಗದ ಭಾರತದ 101 ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಿರುವಾಗ ಜಿಲ್ಲೆಯು ಕೊರೋನ ವೈರಸ್ ಹರಡುವಿಕೆಯನ್ನು ನಿಯಂತ್ರಿಸಿದ್ದು ಭಾರೀ ಸಾಧನೆಯಾಗಿದೆ ಎಂದು ಯಾದವ್ ತನ್ನ ಪತ್ರದಲ್ಲಿ ಬರೆದಿದ್ದಾರೆ. ಶ್ರೀಮಂತ ರಾಷ್ಟ್ರಗಳು ಮತ್ತು ಭಾರತದ ಮುಂದುವರಿದ ಜಿಲ್ಲೆಗಳಿಗೂ ಈ ಸಾಧನೆ ಸಾಧ್ಯವಾಗಿಲ್ಲ ಎನ್ನುವುದನ್ನು ಅವರು ಬೆಟ್ಟು ಮಾಡಿದ್ದಾರೆ.
ಕಂಟೈನ್ಮೆಂಟ್ ಝೋನ್ಗಳಲ್ಲಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲೆಯು ಸಮುದಾಯ ಹರಡುವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಭಾರೀ ಪ್ರಮಾಣದಲ್ಲಿ ಕೊರೋನ ವೈರಸ್ ಪರೀಕ್ಷೆಗಳನ್ನೂ ನಡೆಸಲಾಗಿತ್ತು.
ರೋಗದ ಲಕ್ಷಣಗಳಿದ್ದರೆ ಯಾವುದೇ ಭೀತಿಯಲ್ಲದೆ ವರದಿ ಮಾಡುವಂತೆ ಜಿಲ್ಲಾಡಳಿತವು ಜನರಲ್ಲಿ ಜಾಗ್ರತಿಯನ್ನು ಮೂಡಿಸಿತ್ತು. ನೂಹ್ನ ಶೇ.80ರಷ್ಟು ನಿವಾಸಿಗಳು ಮೇವ್ ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಆದರೆ ಆಡಳಿತವು ನಿರ್ದಿಷ್ಟ ಗುಂಪನ್ನು (ತಬ್ಲೀಗಿಗಳು) ಹೆಸರಿಸುವ ಮತ್ತು ಅವಮಾನಿಸುವ ಗೋಜಿಗೆ ಹೋಗದೆ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಎಲ್ಲ ಸಮುದಾಯಗಳನ್ನು ಭಾಗಿಯಾಗಿಸಿತ್ತು. ಜಿಲ್ಲಾಡಳಿತವು ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿತ್ತು ಮತ್ತು ಸಮುದಾಯ ಹರಡುವಿಕೆಯನ್ನು ತಡೆಯಲು ಲಕ್ಷಣಗಳಿದ್ದರೆ ವರದಿ ಮಾಡುವಂತೆ ಮತ್ತು ಪರೀಕ್ಷೆಗೊಳಗಾಗುವಂತೆ ಸ್ಥಳೀಯ ಸಮುದಾಯಗಳಲ್ಲಿ ತಿಳುವಳಿಕೆಯನ್ನು ಮೂಡಿಸಿತ್ತು ಎಂದು ಯಾದವ್ ತನ್ನ ಪತ್ರದಲ್ಲಿ ಬರೆದಿದ್ದಾರೆ.
ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಮಾಜಿ ಶಾಸಕ ಚೌಧರಿ ಝಾಕಿರ್ ಹುಸೇನ್ ಅವರ ಪರಿಶ್ರಮವನ್ನೂ ಯಾದವ್ ಪ್ರಶಂಸಿಸಿದ್ದಾರೆ. ಆತಂಕಿತ ಜನರ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಹುಸೈನ್ ಅವರು ಜಮಾಅತ್ ಸದಸ್ಯರು ಮತ್ತು ಇಮಾಮ್ಗಳನ್ನು ಭೇಟಿಯಾಗಿ ಮಾತುಕತೆಗಳನ್ನು ನಡೆಸುತ್ತಿದ್ದರು ಎನ್ನುವುದನ್ನು ಯಾದವ್ ಬೆಟ್ಟು ಮಾಡಿದ್ದಾರೆ.
ಕೃಪೆ: Thewire.in







