ಬೆಂಗಳೂರಿನಿಂದ ಟ್ರಕ್ನಲ್ಲಿ ರಾಜಸ್ಥಾನಕ್ಕೆ ಸಾಗುತ್ತಿದ್ದ 101 ಕಾರ್ಮಿಕರು ವಶಕ್ಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 12: ರಾಜಧಾನಿ ಬೆಂಗಳೂರಿನಿಂದ ಗೂಡ್ಸ್ ಟ್ರಕ್ ವಾಹನದ ಮೂಲಕ ರಾಜಸ್ಥಾನದ ಕಡೆಗೆ ಹೊರಟ್ಟಿದ್ದ 101 ಕಾರ್ಮಿಕರನ್ನು ಇಲ್ಲಿನ ಪುಣೆ-ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಳಿಯಲ್ಲಿರುವ ಗಡಿಭಾಗದ ಚೆಕ್ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಗ್ಗೆ ಹಿರೇಬಾಗೇವಾಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಮತ್ತು ಇತರ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮಕ್ಕಳು ಸೇರಿದಂತೆ ಹಲವು ಕಾರ್ಮಿಕರು ಯಾವುದೇ ರೀತಿಯ ಅನುಮತಿ ಇಲ್ಲದೆ, ಗೂಡ್ಸ್ ಟ್ರಕ್ ವಾಹನದಲ್ಲಿ ಸಾಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಕಾರ್ಮಿಕರನ್ನು ವಶಕ್ಕೆ ಪಡೆದು ಅವರನ್ನು ಕಾಲೇಜ್ ಆಫ್ ಫಿಸಿಕಲ್ ಎಜ್ಯುಕೇಶನ್ನ ಕ್ರೀಡಾಂಗಣಕ್ಕೆ ಕರೆತಂದು ವಿಚಾರಣೆ ನಡೆಸಿದ ಬಳಿಕ ನೆಹರು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ನಲ್ಲಿ ಇನ್ಸಿಟ್ಯೂಷನಲ್ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ.
ಓರ್ವನಿಗೆ ಜ್ವರ: ಈ ಪೈಕಿ ಒಬ್ಬ ಕಾರ್ಮಿಕನಿಗೆ ಜ್ವರ ಇರುವುದು ವೈದ್ಯಕೀಯ ತಪಾಸಣೆ ಮಾಡಿದಾಗ ತಿಳಿದುಬಂದಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಳಗಾವಿ ನಗರ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಹೇಳಿದ್ದಾರೆ.







