ವಿಶೇಷ ರೈಲುಗಳಲ್ಲಿ ಪ್ರಯಾಣಕ್ಕೆ ಆರೋಗ್ಯಸೇತು ಆ್ಯಪ್ ಕಡ್ಡಾಯ

ಹೊಸದಿಲ್ಲಿ: ಇಂದಿನಿಂದ ಆರಂಭವಾಗಿರುವ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವವರು ಆರೋಗ್ಯಸೇತು ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಭಾರತೀಯ ರೈಲ್ವೆ ಹೇಳಿದೆ.
ಆದರೆ ಆಯಾ ಪ್ರಕರಣಗಳನ್ನು ಆಧರಿಸಿ ವಿನಾಯ್ತಿ ನೀಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಆದರೆ ಆ್ಯಪ್ ಹೊಂದಿಲ್ಲದ ಪ್ರಯಾಣಿಕರಿಗೆ ಅವಕಾಶ ನೀಡದಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ರೈಲ್ವೆ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಹೇಳಿಲ್ಲ. ಸೋಮವಾರ ಮಧ್ಯರಾತ್ರಿ ಬಳಿಕ ಮಾಡಿದ ಟ್ವೀಟ್‌ನಲ್ಲಿ ಇದನ್ನು ಕಡ್ಡಾಯಪಡಿಸಲಾಗಿದೆ.
ರೈಲು ಪ್ರಯಾಣಕ್ಕೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ರೈಲ್ವೆ ವಕ್ತಾರ ಆರ್.ಡಿ.ಬಾಜಪೇಯಿ ಹೇಳಿದ್ದಾರೆ. ಅಂತೆಯೇ ಆನ್‌ಲೈನ್ ಟಿಕೆಟ್ ಕಾಯ್ದಿರಿಸಲು ಮೊಬೈಲ್ ಸಂಖ್ಯೆ ಕೂಡಾ ಕಡ್ಡಾಯ. ಆ ಫೋನನ್ನು ತಮ್ಮ ಪ್ರಯಾಣದ ವೇಳೆ ಪ್ರಯಾಣಿಕರು ಒಯ್ಯಬೇಕಾಗುತ್ತದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಲೇ ಆ್ಯಪ್ ಕಡ್ಡಾಯಪಡಿಸಲಾಗಿದೆ. ಎಲ್ಲ ಪ್ರಯಾಣಿಕರು ಮೊಬೈಲ್ ಒಯ್ಯುವುದರಿಂದ ಇದು ಸಮಸ್ಯೆಯಾಗುವುದಿಲ್ಲ. ಆ್ಯಪ್ ಬಳಸಲು ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.