ದುಬೈನಿಂದ ಮಂಗಳೂರು ತಲುಪಿದ ಮೊದಲ ವಿಮಾನ
ಗಲ್ಫ್ ರಾಷ್ಟ್ರದಿಂದ ತವರಿಗೆ ಮರಳಿದ ಕನ್ನಡಿಗರು

ಮಂಗಳೂರು : ಲಾಕ್ ಡೌನ್ ಬಳಿಕ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಮೊದಲ ವಿಮಾನ ಇಂದು ರಾತ್ರಿ ಬಂದಿಳಿಯಿತು.
ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು 176 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ರಾತ್ರಿ 10.10ಕ್ಕೆ ಲ್ಯಾಂಡ್ ಆಯಿತು. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು.
ವಿಮಾನ ಆಗಮನ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.
ವಿಮಾನದಲ್ಲಿದ್ದ 176 ಪ್ರಯಾಣಿಕರು ಕ್ವಾರಂಟೈನ್‌ಗೆ
ಕೊರೋನ-ಲಾಕ್‌ಡೌನ್‌ನಿಂದ ಯುಎಇಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು ಹೊತ್ತ ವಿಮಾನವು ಮಂಗಳವಾರ ರಾತ್ರಿ ಸುಮಾರು 10:10ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ. ಈ ವಿಮಾನದಲ್ಲಿದ್ದ 176 ಪ್ರಯಾಣಿಕರನ್ನು ನಗರದ ವಿವಿಧ ಲಾಡ್ಜ್/ಹೊಟೇಲ್, ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ಗೊಳಪಡಿಸಲಾಯಿತು.
ವಿಮಾನ ನಿಲ್ದಾಣದಲ್ಲಿದ ಪ್ರಯಾಣಿಕರನ್ನು ಮೊದಲು ಆರೋಗ್ಯ ತಪಾಸಣೆ ಮಾಡಲಾಯಿತು. ವಿಮಾನ ನಿಲ್ದಾಣದಲ್ಲೇ ಹೋಟೆಲ್‌ಗಳನ್ನು ಗುರುತಿಸಲು ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಪ್ರಯಾಣಿಕರು ತಾವು ಗುರುತಿಸಿರುವ ಹೋಟೆಲ್‌ಗಳಿಗೆ ವಾಹನಗಳ ಮೂಲಕ ತಲುಪಿಸಲಾಯಿತು.
ಯುಎಇನಿಂದ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರಿಗಾಗಿ ದ.ಕ.ಜಿಲ್ಲಾಡಳಿತವು ನಗರದ 17 ಹೋಟೆಲ್/ಲಾಡ್ಜ್ ಹಾಗೂ 12 ಹಾಸ್ಟೆಲ್‌ಗಳನ್ನು ವ್ಯವಸ್ಥೆ ಕಲ್ಪಿಸಲಾಯಿತು. ಪ್ರಯಾಣಿಕರನ್ನು ಬರಮಾಡಿಕೊಳ್ಳಲು, ಹೋಟೆಲ್ ಬುಕ್ಕಿಂಗ್ ಮತ್ತು ವಾಹನ ವ್ಯವಸ್ಥೆ, ಹೋಟೆಲ್ ಕ್ವಾರಂಟೈನ್ ವ್ಯವಸ್ಥೆ ಹೀಗೆ ಪ್ರತಿಯೊಂದಕ್ಕೂ ಒಬ್ಬೊಬ್ಬ ಅಧಿಕಾರಿಯನ್ನು ಜಿಲ್ಲಾಡಳಿತ ನೇಮಕ ಮಾಡಿತ್ತು.
ಪ್ರಯಾಣಿಕರಲ್ಲಿ ‘ಎ’ ಮತ್ತು ‘ಬಿ’ ಎಂದು 2 ವಿಭಾಗ ಮಾಡಲಾಗಿದೆ. ಕೆಮ್ಮು, ಜ್ವರ, ನೆಗಡಿ ಇರುವವರು ‘ಎ’ ವಿಭಾಗದ ಪ್ರಯಾಣಿಕರಾಗಿದ್ದು, ಇವರಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಿ ಬೇಕಾಗುವ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ‘ಬಿ’ ವಿಭಾಗದ ಪ್ರಯಾಣಿಕರು ಯಾವುದೇ ರೋಗ ಲಕ್ಷಣ ಇಲ್ಲದವರಾಗಿದ್ದು, ಅಂತಹವರನ್ನು ಹೋಟೆಲ್/ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ.
ವಿಮಾನ ನಿಲ್ದಾಣ ತಲುಪಿದ ಅನಿವಾಸಿ ಕನ್ನಡಿಗರನ್ನು ಅವರ ಕುಟುಂಬಸ್ಥರು ಅಥವಾ ಸ್ನೇಹಿತರ ಸಹಿತ ಸಾರ್ವಜನಿಕರಿಗೆ ವಿಮಾನ ನಿಲ್ದಾಣ ಪ್ರವೇಶ ನಿಷೇಧಿಸಲಾಗಿತ್ತು. ಕ್ವಾರೆಂಟೈನ್ ಕೇಂದ್ರಗಳಿಗೂ ಯಾರಿಗೂ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.






.jpeg)



.jpeg)




