ನಾಲ್ಕನೇ ಮೈಸೂರು ಯುದ್ಧ ಮತ್ತು ಟಿಪ್ಪುವಿನ ನೆನಪು

ಅಲ್ಲಿ ಸರಿ ಸುಮಾರು 12,000 ಶವಗಳಿದ್ದವು ಅದರಲ್ಲಿ ಮಹಿಳೆಯರ ಶವಗಳೂ ಇದ್ದವು. ಪ್ರಾಣವನ್ನು ಪಣವಾಗಿಟ್ಟು ಮಹಿಳೆಯರು ಸಹ ರಣರಂಗದಲ್ಲಿ ಹೋರಾಡುತ್ತಾ ಅಸುನೀಗಿದ್ದರು. ಬ್ರಿಟಿಷರಿಗೆ ಸುಲ್ತಾನ ಯಾರೆಂಬುದನ್ನು ಗುರುತಿಸಲಿಕ್ಕಾಗಲಿಲ್ಲ. ಏಕೆಂದರೆ ಸುಲ್ತಾನನಿಗೂ ಮತ್ತು ಒಬ್ಬ ಸಾಮಾನ್ಯ ಸೈನಿಕನಿಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಸುಲ್ತಾನನ ಕಳೆಬರದ ಗುರುತು ಸಿಕ್ಕಾಗ ಖಡ್ಗವನ್ನು ಬಲವಾಗಿ ಹಿಡಿದಿದ್ಧ ಸುಲ್ತಾನನ ಕೈ ಮೇಲಕ್ಕೆ ಎತ್ತಿಕೊಂಡಿತ್ತು. ಸತ್ತು ಬಿದ್ದಿದ್ದ ಸುಲ್ತಾನನ ಕಳೆಬರದ ಬಳಿ ಹೋಗಲು ಬ್ರಿಟಿಷರು ಹೆದರುತ್ತಿದ್ದರು. ಲಾರ್ಡ್ ಹ್ಯಾರಿಸ್ ಯುದ್ಧ ಭೂಮಿಗೆ ಬಂದು ಟಿಪ್ಪುಸುಲ್ತಾನನ ಶವದ ಮುಂದೆ ನಿಂತು ಆನಂದದಿಂದ ಗದ್ಗದಿತನಾಗಿ ಹೇಳಿದ- ‘ಇಂದಿನಿಂದ ಭಾರತ ನಮ್ಮದು’ ಎಂದು.
ನಾಗಪುರದ ಒಪ್ಪಂದ ಮಾಡಿಕೊಂಡು ಸಿಂಧಿಯರನ್ನು ಅಲ್ಲಿಂದ ತೆರವುಗೊಳಿಸಿ ಹೈದರಾಬಾದಿನ ನವಾಬರೊಂದಿಗೆ ಸೇರಿ ಬ್ರಿಟಿಷರು ತಮ್ಮ ದಕ್ಷಿಣ ಮಾರ್ಗವನ್ನು ಸುಗಮ ಮಾಡಿಕೊಂಡು ಟಿಪ್ಪುಸುಲ್ತಾನನ ಶ್ರೀರಂಗಪಟ್ಟಣಕ್ಕೆ ಲಗ್ಗೆ ಹಾಕಿ ಜನರ ಮಧ್ಯೆ ಕಲಹವನ್ನು ಉಂಟು ಮಾಡಿದರು. ಬ್ರಿಟಿಷರು ಶ್ರೀರಂಗಪಟ್ಟಣಕ್ಕೆ ಬರುವಾಗ ದಾರಿಯುದ್ದಕ್ಕೂ ಸುಮಾರು ಕಷ್ಟ-ನಷ್ಟಗಳನ್ನು ಎದುರಿಸಿದರು.
ಬ್ರಿಟಿಷ್ ಮತ್ತು ಹೈದರಾಬಾದ್ ಸೈನ್ಯ ಶ್ರೀರಂಗಪಟ್ಟಣಕ್ಕೆ ಬಂದು ತಲುಪಿದಾಗ ಟಿಪ್ಪುಸುಲ್ತಾನನಿಗೆ ಎರಡು ಕಡೆಯ ಅಪಾಯಗಳನ್ನು ಎದುರಿಸಬೇಕಾಯಿತು. ಶತ್ರುಗಳು ಕೋಟೆಯ ಬಾಗಿಲ ಮುಂದಿದ್ದರೆ ಸಂಚುಕೋರರು ಕೋಟೆಯ ಒಳಗಿದ್ದರು. ಶ್ರೀರಂಗನ ದೇವಸ್ಥಾನ ಸಂಚುಕೋರರ ತಾಣವಾಗಿತ್ತು. ಕರಾವಳಿ ಪ್ರದೇಶಗಳನ್ನು ನಮಗೆ ಒಪ್ಪಿಸಿ, ಫ್ರೆಂಚರನ್ನು ಅಲ್ಲಿಂದ ತೆರವುಗೊಳಿಸಿ, ಕಪ್ಪಕಾಣಿಕೆ ಕೊಡಿ ಎನ್ನುವ ಶರತ್ತುಗಳ ಮೇಲೆ ಟಿಪ್ಪುಸುಲ್ತಾನ್ ನೊಂದಿಗೆ ಬ್ರಿಟಿಷರು ಸಂಧಿ ಮಾಡಿಕೊಳ್ಳಲು ಮುಂದಾದರು. ತಮ್ಮ ಸ್ವಾರ್ಥಕ್ಕಾಗಿ ಸಿಂಹಾಸನವನ್ನು ಉಳಿಸಿಕೊಂಡ ಅಕ್ಕ-ಪಕ್ಕದ ರಾಜ್ಯದ ಬೇರೆ ಅರಸರಂತೆ ಟಿಪ್ಪುಸುಲ್ತಾನ್ ಸಹ ಈ ಶರತ್ತುಗಳನ್ನು ಒಪ್ಪಿಕೊಂಡು ತನ್ನ ಪ್ರಾಣವನ್ನು ಮತ್ತು ತನ್ನ ಸಿಂಹಾಸನವನ್ನು ರಕ್ಷಿಸಿಕೊಂಡು ಆರಾಮಾಗಿ ಇರಬಹುದಿತ್ತು. ಆದರೆ ಟಿಪ್ಪುಸುಲ್ತಾನ್ ಶರತ್ತುಗಳನ್ನು ಒಪ್ಪದೇ ತನ್ನ ಪ್ರಾಣವನ್ನು ಪಣವಾಗಿಟ್ಟು ಸ್ವಾತಂತ್ರವನ್ನು ಬಯಸಿದ. ಯುದ್ಧದ ಸಮಯದ ಆ ನಿರ್ಬಂಧಿತ ಅವಧಿಯ ಹದಿನಾಲ್ಕು ದಿನಗಳನ್ನು ಟಿಪ್ಪುಸುಲ್ತಾನ್ ವಾಟರ್ ಗೇಟಿನ ಬಳಿ ಕಳೆದ ಎಂದು ಕರ್ನಲ್ ಬೀಟ್ಸ್ ಸನ್ ಹೇಳಿದ್ದಾನೆ.
ಮೇ ನಾಲ್ಕರ ಮಧ್ಯಾಹ್ನ ಊಟಕ್ಕೆ ಕುಳಿತು ಒಂದೆರಡು ತುತ್ತು ತಿಂದಿರಬೇಕು, ಅಷ್ಟರಲ್ಲಿ ಸೈಯದ್ ಗಪಾರ್ ಗೆ ಗುಂಡಿಕ್ಕಿ ಕೊಲ್ಲಲಾಯಿತು ಎಂಬ ಸುದ್ದಿ ಬಂತು. ಅವಶ್ಯಕತೆ ಬಿದ್ದಾಗ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವೆ ಎಂದು ಆರು ವರ್ಷಗಳ ಹಿಂದೆ ಶಪಥ ಮಾಡಿದ್ದ ಪ್ರಾಮಾಣಿಕ ವ್ಯಕ್ತಿಗಳಲ್ಲಿ ಸೈಯದ್ ಗಪಾರ್ ಒಬ್ಬ. ಕೈ ತುತ್ತನ್ನು ಬಿಟ್ಟು ಟಿಪ್ಪುಸುಲ್ತಾನ್ ಪರಿಣಾಮವನ್ನು ಎದುರಿಸಲು ತುತ್ತಿದ್ದ ಅಂಗೈಯಲ್ಲಿ ಪ್ರಾಣವನ್ನು ಇಟ್ಟು ಯುದ್ಧಕ್ಕೆ ಸಿದ್ಧನಾಗಿ ಎದ್ದು ನಿಂತು ತನ್ನ ಖಡ್ಗವನ್ನು ಎದೆಗೇರಿಸಿದ. ಡಬಲ್ ಬ್ಯಾರೆಲ್ಡ್ ಬಂದೂಕನ್ನು ತನ್ನ ಕೈಯಲ್ಲಿ ಹಿಡಿದ. ಇಷ್ಟು ಹೊತ್ತಿಗಾಗಲೇ ಬ್ರಿಟಿಷ್ ಸೈನ್ಯ ಕೋಟೆಯೊಳಗೆ ನುಗ್ಗಿತ್ತು. ಟಿಪ್ಪು ಸುಲ್ತಾನ್ ಶತ್ರುಗಳ ಮೇಲೆ ಮುಗಿಬಿದ್ದು ಪ್ರಾಮಾಣಿಕ ವ್ಯಕ್ತಿಗಳೊಂದಿಗೆ ಯುದ್ಧಭೂಮಿಗೆ ಬಂದು ತನ್ನ ವೈರಿಗಳಿಗೆ ಮುಖಮುಖಿಯಾದ. ಕೋಟೆಯನ್ನು ಸುತ್ತುವರಿದಿದ್ದ ಬ್ರಿಟಿಷ್ ಸೈನ್ಯವು ಒಮ್ಮೆಲೆ ಟಿಪ್ಪುವಿನ ಕಡೆ ಗುಂಡಿನ ಸುರಿಮಳೆ ಮಾಡಲಾರಂಭಿಸಿತು. ಟಿಪ್ಪುಅವರನ್ನು ಎದುರಿಸುತ್ತ ರಣರಂಗಕ್ಕೆಬಂದು ಬ್ರಿಟಿಷ್ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡತೊಡಗಿದ. ಬ್ರಿಟಿಷ್ ಮತ್ತು ಟಿಪ್ಪು ಸುಲ್ತಾನ್‌ನ ಸೈನಿಕರ ನಡುವೆ ಮುಖಾಮುಖಿ ಯುದ್ಧ ಆರಂಭವಾಯಿತು. ಟಿಪ್ಪು ಸುಲ್ತಾನ್ ಶತ್ರು ಸೈನ್ಯದಿಂದ ಸುತ್ತುವರಿಯಲ್ಪಟ್ಟ.
ಒಬ್ಬ ಸಾಮಾನ್ಯ ಸೈನಿಕನಂತೆ ಕಾದಾಡುತ್ತಿದ್ದ ಟಿಪ್ಪುಸುಲ್ತಾನನ ಹಿತೈಷಿಗಳು ತಮ್ಮ ಇರುವಿಕೆಯನ್ನು ಬ್ರಿಟಿಷರಿಗೆ ತಿಳಿಸಿ ಎಂದು ಕೇಳಿಕೊಂಡರು. ನರಿಯಾಗಿ ನೂರು ವರ್ಷ ಬದುಕುವುದಕ್ಕಿಂತ ಹುಲಿಯಾಗಿ ಒಂದು ದಿನ ಬದುಕುವುದು ಲೇಸು ಎಂದು ಹೇಳಿ ಟಿಪ್ಪು ಖಡ್ಗವನ್ನು ಝಳಪಿಸಿ ಬ್ರಿಟಿಷ್ ಸೈನಿಕರ ನಾಲ್ಕಾರು ರುಂಡಗಳನ್ನು ನೆಲಕ್ಕುರುಳಿಸಿದ. ಗುಂಡುಗಳ ಆರ್ಭಟ ಹೆಚ್ಚಾಯಿತು. ಎರಡು ಕಡೆಯವರು ವೀರಾವೇಶದಿಂದ ಕಾದಾಡಿದರು. ಟಿಪ್ಪು ಸುಲ್ತಾನನ ಸೈನ್ಯ ಜೀವನದ ಹಂಗು ತೊರೆದು ಹೋರಾಡಿತು. ರಣರಂಗದ ಮಧ್ಯೆ ಸುಲ್ತಾನನ ಕುದುರೆಗೆ ಗುಂಡು ತಾಗಿ ಅದು ಧರೆಗುರುಳಿತು. ಕೆಳಗೆ ಬಿದ್ದ ಟಿಪ್ಪುಸುಲ್ತಾನ್ ನೆಲದ ಮೇಲೆ ನಿಂತೇ ಕಾದಾಡಿ ನೂರಾರು ಶತ್ರು ಸೈನಿಕರನ್ನು ಕೊಂದ. ಅವನ ಪ್ರಾಮಾಣಿಕ ಸೈನಿಕರು ಒಬ್ಬರಾದ ಮೇಲೊಬ್ಬರು ಪ್ರಾಣವನ್ನು ಆಹುತಿ ನೀಡಿದರು. ಟಿಪ್ಪುಸುಲ್ತಾನನ ಸೈನಿಕರ ಸಂಖ್ಯೆ ಕಡಿಮೆಯಾಗಿ ರಣರಂಗದಲ್ಲಿ ಟಿಪ್ಪುಸುಲ್ತಾನ್ ಇದ್ದಾನೆ ಎಂದು ಬ್ರಿಟಿಷರಿಗೆ ತಿಳಿದ ತಕ್ಷಣ ಬ್ರಿಟಿಷರು ಆಕ್ರಮಣವನ್ನು ದ್ವಿಗುಣಗೊಳಿಸಿ ಗುಂಡಿನ ಸುರಿಮಳೆಗೈದರು. ಅವರು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ, ಒಬ್ಬ ಅರಸ ಸಾಮಾನ್ಯ ಸೈನಿಕನಂತೆ ಯುದ್ಧ ಭೂಮಿಯಲ್ಲಿ ಹೋರಾಡುತ್ತಾನೆ ಎಂದು.
ಭಾರತದ ಇತಿಹಾಸದಲ್ಲಿ ಒಬ್ಬ ಅರಸ ಸಾಮಾನ್ಯ ಸೈನಿಕನಾಗಿ ಹೋರಾಡಿ ಪ್ರಾಣವನ್ನು ಪಣಕ್ಕಿಟ್ಟಿದ್ದೇ ಇಲ್ಲ. ಇಹಲೋಕದ ಪರಿವಿಲ್ಲದೆ ವ್ಯಾಘ್ರನಂತೆ ಕಾದಾಡುತ್ತಿದ್ದ ಸುಲ್ತಾನನು ಎದೆಗೆ ಗುಂಡು ತಾಗಿ ನೆಲಕ್ಕುರುಳಿದ. ತಕ್ಷಣ ರಣರಂಗದಲ್ಲಿ ಗೊಂದಲವುಂಟಾಯಿತು. ಇದರ ನಂತರ ಏನಾಗುತ್ತಿದೆ ಎಂಬ ಪರಿವೇ ಯಾರಿಗೂ ಇರಲಿಲ್ಲ. ಸುಲ್ತಾನನ ಶವದ ಸುತ್ತ ಸಾವಿರಾರು ಪ್ರಾಮಾಣಿಕ ಸೈನಿಕರ ಶವದ ರಾಶಿ ಬಿತ್ತು. ಅಲ್ಲಿ ಸರಿ ಸುಮಾರು 12,000 ಶವಗಳಿದ್ದವು ಅದರಲ್ಲಿ ಮಹಿಳೆಯರ ಶವಗಳೂ ಇದ್ದವು. ಪ್ರಾಣವನ್ನು ಪಣವಾಗಿಟ್ಟು ಮಹಿಳೆಯರು ಸಹ ರಣರಂಗದಲ್ಲಿ ಹೋರಾಡುತ್ತಾ ಅಸುನೀಗಿದ್ದರು. ಬ್ರಿಟಿಷರಿಗೆ ಸುಲ್ತಾನ ಯಾರೆಂಬುದನ್ನು ಗುರುತಿಸಲಿಕ್ಕಾಗಲಿಲ್ಲ. ಏಕೆಂದರೆ ಸುಲ್ತಾನನಿಗೂ ಮತ್ತು ಒಬ್ಬ ಸಾಮಾನ್ಯ ಸೈನಿಕನಿಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಸುಲ್ತಾನನ ಕಳೆಬರದ ಗುರುತು ಸಿಕ್ಕಾಗ ಖಡ್ಗವನ್ನು ಬಲವಾಗಿ ಹಿಡಿದಿದ್ದ ಸುಲ್ತಾನನ ಕೈ ಮೇಲಕ್ಕೆ ಎತ್ತಿಕೊಂಡಿತ್ತು. ಸತ್ತು ಬಿದ್ದಿದ್ದ ಸುಲ್ತಾನನ ಕಳೆಬರದ ಬಳಿ ಹೋಗಲು ಬ್ರಿಟಿಷರು ಹೆದರುತ್ತಿದ್ದರು. ಲಾರ್ಡ್ ಹ್ಯಾರಿಸ್ ಯುದ್ಧ ಭೂಮಿಗೆ ಬಂದು ಟಿಪ್ಪುಸುಲ್ತಾನನ ಶವದ ಮುಂದೆ ನಿಂತು ಆನಂದದಿಂದ ಗದ್ಗದಿತನಾಗಿ ಹೇಳಿದ- ‘ಇಂದಿನಿಂದ ಭಾರತ ನಮ್ಮದು’ ಎಂದು.
ಗಂಜಾಂನಲ್ಲಿ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಲಾಯಿತು. ತಂಗಾಳಿ ಬೀಸುತ್ತಿತ್ತು. ಜನ ಬಿಕ್ಕಿ-ಬಿಕ್ಕಿ ಅಳುತ್ತಿದ್ದರು. ಶ್ರೀರಂಗಪಟ್ಟಣ ನಿಶಬ್ದ! ಸೂಜಿ ಬಿದ್ದರೂ ಸದ್ದಾಗುತ್ತಿತ್ತು. ಜನ ಭಾರವಾದ ಹೃದಯಗಳಿಂದ ಅಂತಿಮ ನಮನ ಸಲ್ಲಿಸಲು ಸಾಗರದಂತೆ ಬರುತ್ತಿದ್ದರು. ಆಕಾಶದಲ್ಲಿ ಸಿಡಿಲು ಅಬ್ಬರಿಸುತ್ತಿತ್ತು. ಮೋಡ ಕವಿದಿತ್ತು. ಬ್ರಿಟಿಷ್ ಸೈನಿಕರು ದಿಗ್ಭ್ರಾಂತರಾಗಿ ನಿಂತಿದ್ದರು. ಅವರಿಗೆ ಗುಂಡಿನ ಸಲಾಮ್ ನೀಡಲು ಆದೇಶಿಸಲಾಯಿತು. ಭೂಮಿಯಿಂದ ಹಾರಿಸಿದ ಗುಂಡು ಸಿಡಿಲಾಗಿ ಆಕಾಶದಿಂದ ಭೂಮಿಗೆ ಅಪ್ಪಳಿಸುತ್ತಿತ್ತು. ಅಂತ್ಯಸಂಸ್ಕಾರಕ್ಕೆ ಸಲ್ಲಿಸಲಾಗುತ್ತಿರುವ ಈ ಗೌರವ ಎಂತಹ ಗೌರವ ಎಂದು ಯಾರಿಗೂ ಅರ್ಥವಾಗುತ್ತಿರಲಿಲ್ಲ.
ಮಾರನೆಯ ದಿನ ಮಧ್ಯಾಹ್ನದ ನಮಾಝ್‌ನಗೆ ಸಕಲ ಸರಕಾರಿ ಗೌರವದೊಂದಿಗೆ ಪಾರ್ಥಿವ ಶರೀರವನ್ನು ಕೋಟೆಯ ಹೊರಗೆ ತೆಗೆದುಕೊಂಡು ಹೋಗಲಾಯಿತು. ಸುಲ್ತಾನನ ಪಾರ್ಥಿವ ಶರೀರವನ್ನು ಕೋಟೆಯ ಹೊರಗೆ ಸಾರ್ವಜನಿಕ ವೀಕ್ಷಣೆಗಾಗಿ ಇಡಲಾಯಿತು. ರಾಜಕುಮಾರರು, ನಗರದ ಮುಖ್ಯಸ್ಥರು, ಬ್ರಿಟಿಷ್ ಸರಕಾರಿ ಅಧಿಕಾರಿಗಳು, ಬ್ರಿಟಿಷ್ ಕಂಪೆನಿಯ ನಾಲ್ಕು ಸೈನಿಕ ತುಕಡಿಗಳು ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಗಂಜಾಂನ ದಾರಿಯ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಬಡವರು, ಶ್ರೀಮಂತರು, ಹೆಂಗಸರು, ಮಕ್ಕಳು, ಹಿರಿಯರು, ಮುಸಲ್ಮಾನರು ಮತ್ತು ಹಿಂದೂಗಳು ಹೀಗೆ ಊರಿಗೆ ಊರೇ ಮೆರವಣಿಗೆಯ ಶೋಕದಲ್ಲಿ ಹೆಜ್ಜೆ ಹಾಕುತ್ತಿತ್ತು. ಪಾರ್ಥಿವ ಶರೀರವನ್ನು ಲಾಲ್‌ಬಾಗ್‌ಗೆ ತರಲಾಯಿತು. ಇಡೀ ವಾತಾವರಣ ದುಃಖತಪ್ತವಾಗಿತ್ತು. ಶೋಕ ಮತ್ತು ಗೌರವಾರ್ಥವಾಗಿ ತೋಪುಗಳನ್ನು ಹಾರಿಸಲಾಯಿತು. ಶೋಕದ ಅಲೆ ಆವರಿಸಿತ್ತು. ಆಕಾಶದಲ್ಲಿ ಗುಡುಗು-ಮಿಂಚಿನ ಸದ್ದು. ಪಾರ್ಥಿವ ಶರೀರವನ್ನು ಗುಂಬಜಿಗೆ ತರಲಾಯಿತು. ಬ್ರಿಟಿಷ್ ಬ್ಯಾಂಡು ಸ್ತಬ್ದವಾಗಿ ನಿಂತಿತ್ತು. ನಾಲ್ಕು ಸೈನಿಕ ತುಕಡಿಗಳು ಎರಡು ಸಾಲಾಗಿ ನಿಂತು ಪಾರ್ಥಿವ ಶರೀರವನ್ನು ಮಧ್ಯದಿಂದ ಹೋಗಲು ಅನುವು ಮಾಡಿಕೊಟ್ಟಿತು. ಪಾರ್ಥಿವ ಶರೀರವನ್ನು ಕೆಳಗಿಳಿಸಲಾಯಿತು. ನೆರೆದಿದ್ದ ಜನರು ಪ್ರಾರ್ಥನೆಗೆ ಅನುವಾದರು. ಮಸೀದಿಯ ಮೌಲಾನಾ ಪ್ರಾರ್ಥನೆ ಆರಂಭಿಸಿದರು. ಪ್ರತಿನಿತ್ಯಕ್ಕಿಂತ ಇಂದು ಖತೀಬರ ಧ್ವನಿ ಗಡುಸಾಗಿ ದುಃಖದಿಂದ ಗದ್ಗದಿತವಾಗಿತ್ತು. ಅವರು ಅಲ್ಲಾಹು ಅಕ್ಬರ್ ಎಂದು ಹೇಳಿದ್ದೆ ತಡ ಇಡೀ ಆಕಾಶವೇ ಕಳಚಿ ಭೂಮಿಯ ಮೇಲೆ ಬಿದ್ದಂತೆ ಭಾಸವಾಯಿತು.
ಕರ್ನಲ್ ಮಿಲ್ಸ್ ಹೀಗೆ ಹೇಳಿದ್ದಾನೆ- ಶ್ರೀರಂಗಪಟ್ಟಣ ಪತನವಾದ ನಂತರ ಅಲ್ಲಿಯ ಪ್ರಜೆಗಳು ಬ್ರಿಟಿಷರ ಕ್ರೌರ್ಯಕ್ಕೆ ಗುರಿಯಾದರು. ಈ ಕ್ರೌರ್ಯ ಈ ಹಿಂದೆ ಟಿಪ್ಪುಸುಲ್ತಾನನ ಹೆಸರು ಹೇಳಿ ಬ್ರಿಟಿಷರು ಮಾಡುತ್ತಿದ್ದ ಕ್ರೌರ್ಯಕ್ಕಿಂತ ಸುಮಾರು ಪಟ್ಟು ಹೆಚ್ಚಾಗಿತ್ತು. ತನ್ನ ಗೆಲುವನ್ನು ದುರಹಂಕಾರದಿಂದ ವರ್ಣಿಸುತ್ತ ಲಾರ್ಡ್ ವೆಲ್ಲೆಸ್ಲಿ ತನ್ನ ಸ್ನೇಹಿತನಿಗೆ ಹೀಗೆ ಬರೆದ- ನಾನು ನನ್ನ ವಿಜಯದ ಕ್ರೌರ್ಯವನ್ನು ಹೇಗೆ ಮತ್ತು ಎಷ್ಟು ವಿಸ್ತರಿಸುತ್ತೇನೆ ಎಂದರೆ ಕಂಪೆನಿಯ ಅಧಿಕಾರಿಗಳು ಬಂದು ಭಾರತದ ಮೇಲೆ ಕರುಣೆ ತೋರಿ ಎಂದು ಕೇಳಿಕೊಳ್ಳಬೇಕು.
ವೆಲ್ಲೆಸ್ಲಿಗೆ ವಹಿಸಲಾದ ಜವಾಬ್ದಾರಿಯುತ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ವಿಜಯ ಸಾಧಿಸಿದ್ದಕ್ಕೆ ಸರ್ ಜಾನ್ ಓವನ್ ಅಭಿನಂದಿಸುತ್ತಾನೆ. 6 ಫೆಬ್ರವರಿ 1800ರಂದು ಲಾರ್ಡ್ ವೆಲ್ಲೆಸ್ಲಿ ಕಲ್ಕತ್ತಾಗೆ ಮರಳಿ ಬಂದಾಗ ಅದ್ದೂರಿಯಾದ ಮೆರವಣಿಗೆಯನ್ನು ಆಯೋಜಿಸಿದ. ಮೆರವಣಿಗೆಯಲ್ಲಿ ಲಾರ್ಡ್ ವೆಲ್ಲೆಸ್ಲಿ, ಚೀಫ್ ಜಸ್ಟೀಸ್, ಕಮಾಂಡರ್ ಇನ್ ಚೀಫ್, ಕೌನ್ಸಿಲ್‌ನ ಸದಸ್ಯರು ಮತ್ತು ಮಿಲಿಟರಿಯ ವರಿಷ್ಠಾಧಿಕಾರಿಗಳು ಭಾಗವಹಿಸಿದ್ದರು. ದಾರಿಯ ಇಕ್ಕೆಲಗಳಲ್ಲಿ ಬ್ರಿಟಿಷರ ಸೈನ್ಯ ಸುಸಜ್ಜಿತವಾಗಿ ನಿಂತಿತ್ತು. ಈ ಹಿಂದೆ ಭಾರತ ಇಷ್ಟು ಅದ್ದೂರಿಯಾದ ಸ್ವಾಗತವನ್ನು ಕಂಡಿರಲಿಲ್ಲ. ಬ್ರಿಟಿಷರು ಇದಕ್ಕೆ ಧಾರ್ಮಿಕ ಬಣ್ಣ ಲೇಪಿಸಿದ್ದರು. ಇಂಗ್ಲೆಂಡಿಗೆ ಈ ಸುದ್ದಿ ತಲುಪಿದ ತಕ್ಷಣ ಜನರೆಲ್ಲ ಕುಣಿದು ಕುಪ್ಪಳಿಸಿದರು. ವೆಲ್ಲೆಸ್ಲಿ ಬ್ರಿಟಿಷ್ ಇತಿಹಾಸದ ಮೈಲಿಗಲ್ಲಾದ. ಒಬ್ಬ ಬಡ ಪೋಪ್‌ನ ಮಗನಾಗಿದ್ದ ಹ್ಯಾರಿಸನಿಗೆ ‘ಲಾರ್ಡ್ ಹ್ಯಾರಿಸ್ ಆಫ್ ಶ್ರೀರಂಗಪಟ್ಟಣ’ ಎಂಬ ಬಿರುದು ಕೊಟ್ಟು ಸನ್ಮಾನಿಸಲಾಯಿತು. ಪ್ರತಿಯೊಬ್ಬ ಬ್ರಿಟಿಷ್ ಸೈನಿಕನಿಗೆ ಚಿನ್ನದ ಪದಕಗಳನ್ನು ಕೊಟ್ಟು ಗೌರವಿಸಲಾಯಿತು. ಪದಕದ ಒಂದು ಕಡೆ ಶ್ರೀರಂಗಪಟ್ಟಣ 1799 ಎಂದು ಮತ್ತೊಂದು ಕಡೆ ಹುಲಿಯನ್ನು ಹಿಡಿದು ಕುದುರೆ ಸವಾರಿ ಮಾಡುತ್ತಿರುವ ಸೇಂಟ್ ಜಾರ್ಜ್ ನ ಚಿತ್ರವಿತ್ತು.
ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಾಗ ಹಿಂದೂ-ಮುಸಲ್ಮಾನರು ಸೌಹಾರ್ದದಿಂದ ಇದ್ದರು. ಅಲ್ಲದೆ ಬಹಳ ಶ್ರೀಮಂತರಾಗಿದ್ದರು. ಕೃಷಿ ಭೂಮಿ ಫಲವತ್ತಾಗಿತ್ತು. ಫಸಲು ಸಮೃದ್ಧವಾಗಿತ್ತು. ಪ್ರಜೆಗಳು ಸುಲ್ತಾನನಿಗೆ ಬಹಳ ವಿಧೇಯರಾಗಿದ್ದರು. ಬ್ರಿಟಿಷರು ಶ್ರೀರಂಗಪಟ್ಟಣವನ್ನು ಗೆಲ್ಲಲು ಕೋಟೆಯ ಒಳಗೆ ಪ್ರವೇಶಿಸಿದಾಗ ಪ್ರಜೆಗಳು ತಮ್ಮ ಸಂಪತ್ತನ್ನೆಲ್ಲ ಬ್ರಿಟಿಷರ ಮುಂದೆ ಸುರಿದು ಇದನ್ನೆಲ್ಲ ತೆಗೆದುಕೊಂಡು ಸುಲ್ತಾನ್ ರಾಜ್ಯವನ್ನು ಬಿಟ್ಟು ಬಿಡಿ ಎಂದು ಗೋಗರೆದಿದ್ದರು. ಇದರಿಂದ ಅವರು ಎಷ್ಟು ವಿಧೇಯರಾಗಿದ್ದರು ಎಂದು ಅರ್ಥವಾಗುತ್ತದೆ ಎಂದು ಇತಿಹಾಸಕಾರರು ಬರೆಯುತ್ತಾರೆ. ಕ್ಯಾಪ್ಟನ್ ಲಿಟಲ್, ‘ನಾವು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಾಗ ಕರಕುಶಲ ಕಲೆಯು ಬಹಳ ಸಮೃದ್ಧವಾಗಿತ್ತು. ಇದರಿಂದ ಹೊಸ ನಗರಗಳು ಹುಟ್ಟಿಕೊಳ್ಳಲು ಬಹಳ ಸಹಕಾರಿಯಾಗಿತ್ತು. ಜನರು ತಮ್ಮ ಕೆಲಸಕಾರ್ಯಗಳಲ್ಲಿ ಮಗ್ನರಾಗಿದ್ದರು. ರಾಜ್ಯದ ಯಾವ ಭೂಮಿಯು ಬಂಜರಾಗಿರಲಿಲ್ಲ. ಹೊಲಗದ್ದೆಗಳು ನಳನಳಿಸುತ್ತಿದ್ದವು’ ಎಂದು ಬರೆಯುತ್ತಾರೆ. ಡಬ್ಲ್ಯೂ. ಟರ್ನಿಸ್ ‘ಇಡೀ ಭಾರತದಲ್ಲಿ ಶ್ರೀರಂಗಪಟ್ಟಣದಷ್ಟು ಅಭಿವೃದ್ಧಿ ಹೊಂದಿದ ಸಮೃದ್ಧ ಬೇರೆ ಯಾವ ರಾಜ್ಯವು ಇರಲಿಲ್ಲ’ ಎನ್ನುತ್ತಾರೆ.







