ಕೇಂದ್ರ ಸರಕಾರದಿಂದ ರಾಜ್ಯದ ನಿರ್ಲಕ್ಷ: ಯು.ಟಿ. ಖಾದರ್ ಆರೋಪ
'ಬಿಜೆಪಿ ಸಂಸದರ ರಾಜೀನಾಮೆಗೆ ಆಗ್ರಹ'
ಮಂಗಳೂರು, ಮೇ 12: ಪ್ರಧಾನಮಂತ್ರಿಯ ಕೇರ್ ಫಂಡ್‌ಗೆ ಕರ್ನಾಟಕದಿಂದ 3 ಸಾವಿರ ಕೋ.ರೂ. ದೇಣಿಗೆ ಹೋಗಿದ್ದರೂ ಕೂಡ ಈವರೆಗೂ ಕೇಂದ್ರ ಸರಕಾರ ರಾಜ್ಯಕ್ಕೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಈ ಹಿಂದೆ ಜಿಎಸ್‌ಟಿಯ ರಾಜ್ಯದ ಪಾಲನ್ನೂ ಕೂಡ ಕೇಂದ್ರ ಸರಕಾರ ನೀಡಿರಲಿಲ್ಲ. ಈಗ ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದರೂ ಕರ್ನಾಟಕವನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಶಾಸಕ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ರಾಜ್ಯದ ಜನರಿಗೆ ಮಾಡಿದ ಅವಮಾನ ಇದಾಗಿದೆ. ಕೇಂದ್ರದಿಂದ ಅನುದಾನ ತರಿಸುವ ಧೈರ್ಯವಿಲ್ಲದ ರಾಜ್ಯದ ಸಂಸದರೆಲ್ಲ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದೇಶದ ಇತರ ರಾಜ್ಯ ಸರಕಾರಗಳು ಹೆಚ್ಚು ಪ್ಯಾಕೇಜ್ ಘೋಷಣೆ ಮಾಡಿದ್ದರೂ ರಾಜ್ಯದಲ್ಲಿ ಮಾತ್ರ ಕೇವಲ ಸಾವಿರ ಕೋ.ರೂ. ಪರಿಹಾರ ಘೋಷಿಸಲಾಗಿದೆ. ಇದು ಏನೇನೂ ಸಾಲದು. ತಕ್ಷಣ ಹೆಚ್ಚುವರಿ ಪರಿಹಾರ ಘೋಷಣೆ ಮಾಡಬೇಕು ಎಂದು ಖಾದರ್ ಒತ್ತಾಯಿಸಿದರು.
ಕ್ವಾರಂಟೈನ್ ಗೊಂದಲ: ಇದೀಗ ಅಂತರ್‌ರಾಜ್ಯ ಸಂಚಾರ ಮಾಡಬಹುದು ಎಂಬ ನಿರ್ಧಾರ ಪ್ರಕಟಿಸಿದ್ದರೂ ಮುಂಬೈನಲ್ಲಿರುವ ಬಹಳಷ್ಟು ಜನರಿಗೆ ಇನ್ನೂ ಪಾಸ್ ಸಿಕ್ಕಿಲ್ಲ. ಅವರನ್ನು ಕರೆತಂದರೆ ಯಾವ ರೀತಿ ಕ್ವಾರಂಟೈನ್ ಮಾಡುವುದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಜನರು ಚೆಕ್‌ಪೋಸ್ಟ್‌ಗಳಲ್ಲೇ ಸಿಲುಕಿಕೊಳ್ಳುವಂತಾಗಿದೆ. ಮುಂಬೈ ಕನ್ನಡಿಗರನ್ನು ರಾಜ್ಯ ಸರಕಾರವೇ ಬಸ್ ವ್ಯವಸ್ಥೆ ಕಲ್ಪಿಸಿ ಕರೆತಂದು ಕ್ವಾರಂಟೈನ್‌ನಲ್ಲಿ ಇರಿಸಬೇಕು. ಅದಕ್ಕೂ ಮೊದಲು ಗೊಂದಲಕ್ಕೆ ಆಸ್ಪದವಾಗದಂತೆ ಸ್ಪಷ್ಟ ನಿಯಮ ರೂಪಿಸಬೇಕು ಎಂದು ಖಾದರ್ ಒತ್ತಾಯಿಸಿದರು.
ವಿಮಾನ ಯಾನದಲ್ಲೂ ಅನ್ಯಾಯ: ವಿದೇಶಗಳಲ್ಲಿ ಕರಾವಳಿ ಪ್ರದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೊದಲ ಹಂತದಲ್ಲಿ ವಿದೇಶಗಳಿಂದ ಆಗಮಿಸಿದ 12 ವಿಮಾನಗಳಲ್ಲಿ ರಾಜ್ಯಕ್ಕೆ ಬಂದಿರೋದು ಕೇವಲ 2 ಮಂದಿ ಮಾತ್ರ. ಹಾಗಾಗಿ ಇನ್ನೂ ಹೆಚ್ಚಿನ ವಿಮಾನ ಸೇವೆ ಒದಗಿಸಿ ತವರೂರಿಗೆ ಬರಲು ಉದ್ದೇಶಿಸಿರುವ ಎಲ್ಲರಿಗೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಬಿಲ್ ಸಮಸ್ಯೆ: ಮೆಸ್ಕಾಂ ವತಿಯಿಂದ ಗ್ರಾಹಕರಿಗೆ ದುಪ್ಪಟ್ಟು ಬಿಲ್ ವಿಧಿಸುವ ಕುರಿತು ಮೆಸ್ಕಾಂ ಎಂಡಿ ಅವರನ್ನು ಭೇಟಿಯಾಗಿ ಬದಲಾವಣೆಗೆ ಮನವಿ ಮಾಡಿದ್ದೇವೆ. ಅನೇಕರಿಗೆ ಮಿತಿಗಿಂತ ಹೆಚ್ಚು ಬಿಲ್ ಬಂದಿದೆ. ಈ ರೀತಿಯಾದರೆ ಬಡವರು ತೀವ್ರ ಕಷ್ಟಕ್ಕೆ ಸಿಲುಕುತ್ತಾರೆ. ಸರಕಾರ ಇದಕ್ಕೆ ಸ್ಪಷ್ಟ ನಿಯಮ ರೂಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಖಾದರ್ ಎಚ್ಚರಿಕೆ ನೀಡಿದರು.
ನಗರದ ಪಡೀಲ್‌ನ ಫಸ್ಟ್ ನ್ಯೂರೊ ಆಸ್ಪತ್ರೆಯ ಸೋಂಕಿನ ಮೂಲದ ಕುರಿತು ಸ್ಪಷ್ಟತೆ ಬೇಕಾಗಿದೆ. ಆಸ್ಪತ್ರೆ ರೋಗಿಗಳಿಂದಲೇ ಹರಡಿತೇ ಅಥವಾ ಬೇರೆ ಮೂಲಗಳಿಂದ ಹರಡಿತೇ ಎನ್ನುವುದು ಗೊತ್ತಾಗಬೇಕು. ಕೇರಳದಿಂದ ಬಂದವರಿದ್ದರೆ ಔಟ್ ಪೇಷೆಂಟ್, ಇನ್‌ಪೇಷೆಂಟ್‌ಗಳ ಸಂಪೂರ್ಣ ಮಾಹಿತಿ ಇದ್ದೇ ಇರುತ್ತದೆ. ಎರಡೂ ಜಿಲ್ಲೆಗಳ ಆಡಳಿತ ಸೇರಿ ಟೀಮ್ ವರ್ಕ್ ಮಾಡಿ ಸಮಸ್ಯೆ ಬಗೆಹರಿಸುವುದು ಬಿಟ್ಟು ‘ಇಗೋ’ ಇಟ್ಟುಕೊಂಡರೆ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ ಎಂದು ಖಾದರ್ ಅಭಿಪ್ರಾಯಪಟ್ಟರು.







