3ನೇ ಹಂತದ ಲಾಕ್ಡೌನ್ ಬಳಿಕ ನಗರ ಸಾರಿಗೆ ಸಂಚಾರಕ್ಕೆ ಸರಕಾರ ಚಿಂತನೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 12: ಕಳೆದ 50 ದಿನಗಳಿಂದ ಸ್ಥಗಿತಗೊಂಡಿದ್ದ ನಗರ ಸಾರಿಗೆ ಬಸ್ಗಳು (ಬಿಎಂಟಿಸಿ) ಸಂಚಾರ ಬರುವ ಸೋಮವಾರದಿಂದ ಆರಂಭವಾಗುವ ಸಾಧ್ಯತೆಗಳಿವೆ. ಕೊರೋನ 3ನೇ ಹಂತದ ಲಾಕ್ಡೌನ್ ಮೇ 17 ಕ್ಕೆ ಮುಗಿಯಲಿದ್ದು, 3ನೇ ಹಂತದ ಲಾಕ್ಡೌನ್ ಮುಗಿದ ನಂತರ ನಗರ ಸಾರಿಗೆ ಬಸ್ಗಳ ಓಡಾಟಕ್ಕೆ ಅನುವು ಮಾಡಿಕೊಡಲು ಸರಕಾರ ಚಿಂತನೆ ನಡೆಸಿದೆ.
ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಬಿಎಂಟಿಸಿ ಬಸ್ಗಳ ಓಡಾಟಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಒಲವು ತೋರಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಇನ್ನು 2-3 ದಿನಗಳಲ್ಲಿ ಸರಕಾರ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲಿದೆ. ನಗರದಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಸರಕಾರಿ, ಖಾಸಗಿ ಕಚೇರಿಗಳು ಸೀಮಿತ ನೌಕರರೊಂದಿಗೆ ಕಾರ್ಯಾರಂಭ ಮಾಡಿವೆ.
ನೌಕರರ ಓಡಾಟಕ್ಕೆ ನಗರ ಸಾರಿಗೆ ಬಸ್ ಸೌಲಭ್ಯ ಇಲ್ಲದೆ ಇರುವುದು ದೊಡ್ಡ ಅಡಚಣೆಯಾಗಿದ್ದು, ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಜತೆಗೆ ಬಸ್ ಸಂಚಾರ ಆರಂಭ ಸಾಧ್ಯತೆ ಅಗತ್ಯ ಸುರಕ್ಷಿತ ಕ್ರಮಗಳೊಂದಿಗೆ ಬಿಎಂಟಿಸಿ ಬಸ್ ಸೇವೆಯನ್ನು ಪುನರಾರಂಭಿಸಲು ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.
ಮೇ 17ರ ನಂತರ ಎಷ್ಟು ಬಸ್ಗಳನ್ನು ಓಡಿಸಬೇಕು, ಯಾವ ಮಾರ್ಗಕ್ಕೆ ಎಷ್ಟು ಬಸ್ಗಳನ್ನು ಬಿಡಬೇಕು ಎಂಬ ಬಗ್ಗೆ ಯಾವುದೇ ತೀರ್ಮಾನಗಳನ್ನು ಇನ್ನು ತೆಗೆದುಕೊಂಡಿಲ್ಲ. ಇನ್ನ 2-3 ದಿನಗಳಲ್ಲಿ ಅಂತಿಮವಾಗಲಿದೆ. ಸದ್ಯ ಬಿಎಂಟಿಸಿ ಆರೋಗ್ಯ ತುರ್ತು ಸೇವೆಗೆ ಮಾತ್ರ ಕೆಲ ಬಸ್ಗಳನ್ನು ಓಡಿಸುತ್ತಿದೆ. ಸಿಬ್ಬಂದಿ ಹಾಜರಿಗೆ ಸೂಚನೆ ಬಸ್ಗಳ ಓಡಾಟ ಪುನರಾರಂಭಿಸಲು ಚಿಂತನೆ ನಡೆದಿರುವಾಗಲೇ ಬಿಎಂಟಿಸಿ ಇಂದಿನಿಂದ ತನ್ನ ಎಲ್ಲ ಸಿಬ್ಬಂದಿಗಳಿಗೆ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.
ಕಳೆದ 45 ದಿನಗಳಿಂದ ಲಾಕ್ಡೌನ್ ಬಳಿಕ ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಿ ಎಂದು ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಸೂಚನೆ ನೀಡಿದೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ವೈದ್ಯಕೀಯ ಪ್ರಮಾಣ ಪತ್ರ ತರುವಂತೆಯೂ ಬಿಎಂಟಿಸಿ ಸೂಚನೆ ನೀಡಿದೆ. ಆಗಾಗಿ ಬಿಎಂಟಿಸಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಶಾಂತಿನಗರದ ಆಸ್ಪತ್ರೆ ಮುಂಭಾಗದಲ್ಲಿ ಚಾಲಕರು ಮತ್ತು ನಿರ್ವಾಹಕರು ಸಾಲುಗಟ್ಟಿ ನಿಂತಿದ್ದಾರೆ.







