ಪ್ರಧಾನಿ ಮೋದಿ ಅವರ ಪ್ಯಾಕೇಜ್ ಖಾಲಿ ಪುಟವಿದ್ದಂತೆ, ವಿತ್ತ ಸಚಿವರು ಖಾಲಿ ಪುಟ ತುಂಬಲಿದ್ದಾರೆ: ಚಿದಂಬರಂ

ಹೊಸದಿಲ್ಲಿ, ಮೇ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿರುವ 20 ಲಕ್ಷ ಕೋ.ರೂ. ಉತ್ತೇಜನ ಪ್ಯಾಕೇಜ್ ಒಂದು ಶೀರ್ಷಿಕೆ(ಹೆಡ್‌ಲೈನ್)ಹಾಗೂ ಖಾಲಿ ಪೇಜ್(ಬ್ಲಾಂಕ್ ಪೇಜ್)ಇದ್ಧಂತೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಖಾಲಿ ಪುಟವನ್ನು ತುಂಬಲಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ, "ನಿನ್ನೆ ಪ್ರಧಾನಿ ನಮಗೆಲ್ಲರಿಗೂ ಶೀರ್ಷಿಕೆ ಹಾಗೂ ಖಾಲಿ ಪೇಜ್‌ವೊಂದನ್ನು ನೀಡಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಪ್ರತಿಕ್ರಿಯೆ ಖಾಲಿಯಾಗಿದೆ! ಇಂದು ನಾವು ವಿತ್ತ ಸಚಿವೆ ಖಾಲಿ ಪುಟವನ್ನು ತುಂಬುವುದನ್ನು ಎದುರು ನೋಡಬೇಕಾಗಿದೆ. ಸರಕಾರವು ಆರ್ಥಿಕತೆಗೆ ನಿಜವಾಗಿಯೂ ಸೇರಿಸುವ ಹೆಚ್ಚುವರಿ ರೂಪಾಯಿಯನ್ನು ಎಚ್ಚರಿಕೆಯಿಂದ ಲೆಕ್ಕ ಮಾಡಬೇಕೆಂದು'' ಟ್ವೀಟ್ ಮಾಡಿದ್ದಾರೆ.
"ಯಾರು ಎಷ್ಟು ಪಡೆಯುತ್ತಾರೆ?ಎಂದು ನಾವು ಎಚ್ಚರಿಕೆಯಿಂದ ಪರೀಕ್ಷಿಸುತ್ತೇವೆ. ಬಡವರು,ಹಸಿದ ಹಾಗೂ ಮೂರಾಬಟ್ಟೆಯಾಗಿರುವ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ನೂರಾರು ಕಿಲೋಮೀಟರ್ ನಡೆದ ನಂತರ ಅವರು ಏನನ್ನು ನಿರೀಕ್ಷಿಸಬಹುದು ಎನ್ನುವುದನ್ನು ನಾವು ಮೊದಲು ನೋಡುತ್ತೇವೆ. 'ರಿಯಲ್ ಮನಿ' ವಿಚಾರದಲ್ಲಿ ಜನಸಂಖ್ಯೆಯ ಕೆಳಭಾಗವು(13 ಕೋಟಿ ಕುಟುಂಬಗಳು)ಏನು ಪಡೆಯುತ್ತವೆ ಎಂದು ನಾವು ಪರಿಶೀಲಿಸುತ್ತೇವೆ'' ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.





