ಉಡುಪಿ: 11 ಖಾಸಗಿ, ಸರಕಾರಿ ಬಸ್ ಸಂಚಾರ ಆರಂಭ; ಮೊದಲ ದಿನ ನೀರಸ ಪ್ರತಿಕ್ರಿಯೆ

ಉಡುಪಿ, ಮೇ 13: ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ಇಂದು ಪುನಾರಂಭ ಗೊಂಡಿದೆ. ಆದರೆ ನಿಗದಿತ ಸಮಯ ಮತ್ತು ಬಹುತೇಕ ಮಾರ್ಗಗಳಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾರ್ವಜನಿಕರ ಬೇಡಿಕೆಯಂತೆ ಜಿಲ್ಲಾಡಳಿತ ಹಲವು ಷರತ್ತುಗಳೊಂದಿಗೆ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದು, ಇಂದು ಜಿಲ್ಲೆಯಲ್ಲಿ ಒಟ್ಟು ಐದು ಮತ್ತು ಖಾಸಗಿ ಆರು ಬಸ್‌ಗಳು ಮಾತ್ರ ಓಡಾಟ ನಡೆಸಿದ್ದವು. ನಿನ್ನೆಯಿಂದ ಆರಂಭಗೊಂಡ ಉಡುಪಿ- ಜಿಲ್ಲಾಧಿಕಾರಿ ಕಚೇರಿ ನಡುವಿನ ಒಂದು ಕೆಎಸ್ಸಾರ್ಟಿಸಿ ಬಸ್ ಸಂಚಾರ ಇಂದು ಕೂಡ ಮುಂದುವರಿದಿದೆ.
ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೆಜಮಾಡಿ, ಹೆಬ್ರಿ, ಕಾರ್ಕಳಕ್ಕೆ ತಲಾ ಒಂದೊಂದು ಸರಕಾರಿ ಬಸ್‌ಗಳು ಹೊರಟಿದ್ದರೆ, ಕುಂದಾಪುರಕ್ಕೆ ಬೆಳಗ್ಗೆ 9ಗಂಟೆಗೆ ಒಂದು ಸರಕಾರಿ ಬಸ್ ಪ್ರಯಾಣ ಬೆಳೆಸಿವೆ. ಹೆಜಮಾಡಿಗೆ ತೆರಳಿದ ಬಸ್ ವಾಪಸ್ ಉಡುಪಿಗೆ ಮರಳಿದೆ.
ಈ ಬಸ್ಸಿನಲ್ಲಿ ಹೋಗುವಾಗ ಒಬ್ಬರು ಮತ್ತು ಬರುವಾಗ ಮೂವರು ಪ್ರಯಾಣಿಕರು ಮಾತ್ರ ಪ್ರಯಾಣಿಸಿದ್ದರು. ಹೀಗೆ ಎರಡು ಟ್ರಿಪ್‌ನಲ್ಲಿ ಕೇವಲ 103 ರೂ. ಸಂಗ್ರಹವಾಗಿದೆ. ಪ್ರಯಾಣಿಕರಿಲ್ಲದ ಕಾರಣ ಒಂದೇ ಟ್ರಿಪ್‌ಗೆ ಈ ಮಾರ್ಗದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅದೇರೀತಿ ಕುಂದಾಪುರ ಡಿಪೋದಿಂದ ಕುಂದಾಪುರ- ಉಡುಪಿ-ಮಣಿಪಾಲ ಮಾರ್ಗದಲ್ಲಿ ಒಂದು ಬಸ್ ಸಂಚಾರ ಆರಂಭಿಸಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಅದೇರೀತಿ ರಾಘವೇಂದ್ರ ಭಟ್ ಮಾಲಕತ್ವದ ಆರು ‘ಭಾರತಿ’ ಖಾಸಗಿ ಬಸ್‌ಗಳು ಕುಂದಾಪುರಕ್ಕೆ ಸಂಚರಿಸಿದವು. ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಯಿಂದ ಅರ್ಧಗಂಟೆಗೊಂದರಂತೆ ಬಸ್‌ಗಳು ಪ್ರಯಾಣ ಬೆಳೆಸುತ್ತಿವೆ. ನಾಳೆಯಿಂದ ಇದೇ ಕಂಪೆನಿಯವರು ಕಾರ್ಕಳ ಮತ್ತು ಮಣಿಪಾಲಕ್ಕೆ ಬಸ್ ಸಂಚಾರ ಆರಂಭಿಸಲಿದ್ದಾರೆ.
ಬೆಳಗ್ಗೆ ಹೊರಟ ಒಂದು ಭಾರತಿ ಬಸ್‌ನಲ್ಲಿ ಹೋಗುವಾಗ 8 ಸೀಟು ಮತ್ತು ಬರುವಾಗ 12 ಸೀಟುಗಳಿದ್ದರೆ, ಇನ್ನೊಂದು ಬಸ್ಸಿನಲ್ಲಿ ಹೋಗುವಾಗ 5 ಮತ್ತು ಬರುವಾಗ 17 ಸೀಟುಗಳಿದ್ದವು. ಬಸ್ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಪ್ರತಿಯೊಬ್ಬ ಪ್ರಯಾಣಿಕರು ಬಸ್ ಹತ್ತುವಾಗ ಸ್ಯಾನಿಟೈಸರ್ ಹಾಕುತ್ತಿದ್ದೇವೆ. ಮಾಸ್ಕ್ ಇಲ್ಲದ ಪ್ರಯಾಣಿಕರಿಗೆ ಉಚಿತ ಮಾಸ್ಕ್‌ಗಳನ್ನು ನೀಡುತ್ತಿದ್ದೇವೆ ಎನ್ನುತ್ತಾರೆ ಬಸ್‌ನ ಚಾಲಕ ರಫೀಕ್ ಮತ್ತು ಮಹಿಳಾ ನಿರ್ವಾಹಕಿ ರೇಖಾ.
ಆದರೆ ಉಡುಪಿ ಜಿಲ್ಲಾಡಳಿತ ತಿಳಿಸಿರುವಂತೆ ಕಾಪು ಮಲ್ಲಾರು, ಕುಂದಾಪುರ -ಬೈಂದೂರು, ಉಡುಪಿ- ಮಣಿಪಾಲ, ಉಡುಪಿ- ಬಾರಕೂರು- ಸಿದ್ಧಾಪುರ, ಉಡುಪಿ- ಅಲೆವೂರು, ಉಡುಪಿ- ಮಲ್ಪೆ, ಉಡುಪಿ- ಹೂಡೆ, ಉಡುಪಿ- ಬ್ರಹ್ಮಾವರ ಬಸ್‌ಗಳು ಸಂಚಾರ ನಡೆಸಿಲ್ಲ. ಅದೇರೀತಿ ಸಿಟಿ ಬಸ್‌ಗಳು ಕೂಡ ಇಂದು ರಸ್ತೆಗೆ ಇಳಿದಿಲ್ಲ.








