ಕಾಲ್ನಡಿಗೆಯಲ್ಲಿ ಮಂಗಳೂರಿನಿಂದ ಜಾರ್ಖಂಡ್ ಗೆ ಹೊರಟಿದ್ದ ಕಾರ್ಮಿಕರಿಗೆ ಮೂಸಂಬಿ, ಕುಡಿಯುವ ನೀರು ವಿತರಿಸಿದ ಯುವಕರು

ಬಂಟ್ವಾಳ, ಮೇ 13: ಮಂಗಳೂರಿನಿಂದ ಜಾರ್ಖಂಡ್ ಗೆ ಕಾಲ್ನಡಿಗೆಯಲ್ಲಿ ಹೊರಟ ನೂರಾರು ಕಾರ್ಮಿಕರಿಗೆ ಅರ್ಧರಾತ್ರಿಯಲ್ಲೂ ಕೆಲವು ಯುವಕರು ಮೂಸಂಬಿ ಹಣ್ಣು, ಕುಡಿಯುವ ನೀರು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರು ನಗರದ ವಿವಿಧೆಡೆ ಇದ್ದ ಜಾರ್ಖಂಡ್ ಮೂಲದ ಕಾರ್ಮಿಕರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಊರಿಗೆ ತೆರಳಲು ಸರಕಾರ, ಅಧಿಕಾರಿಗಳು ನೀಡಿದ್ದ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧೆಡೆ ಇದ್ದ ಕಾರ್ಮಿಕರು ಒಂದೆಡೆ ಸೇರಿ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದರು.
ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬರುತ್ತಿರುವ ವಿಷಯ ತಿಳಿದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲು, ಪುದು ಗ್ರಾಮ ಪಂಚಾಯತ್ ಸದಸ್ಯ ನಝೀರ್ ಟೆನ್ತ್ ಮೈಲ್ ನೇತೃತ್ವದಲ್ಲಿ ಕಾರ್ಮಿಕರಿಗೆ ಫರಂಗಿಪೇಟೆಯಲ್ಲಿ ಮೂಸಂಬಿ ಹಣ್ಣುಗಳನ್ನು ವಿತರಿಸಲಾಯಿತು.
ಕಾರ್ಮಿಕರು ತುಂಬೆ ತಲುಪುತ್ತಿದ್ದಂತೆ ಪಿ.ಎಫ್.ಐ. ಮುಖಂಡ ಇರ್ಫಾನ್ ತುಂಬೆ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ಹಾಗೂ ಪ್ರಧಾನ ಕಾರ್ಯದರ್ಶಿ ಮೂಸಬ್ಬ ನೇತೃತ್ವದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಅಲ್ಲದೆ ತುಂಬೆಯಲ್ಲಿ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶಿರ್ ಪೆರಿಮಾರ್ ಮತ್ತೆ ಮೂಸಂಬಿ ವಿತರಿಸಿದರು.
ಕಾರ್ಮಿಕರೊಂದಿಗೆ ಬಂಟರ ಭವನದ ವರೆಗೆ ತೆರಳಿದ ಇವರು ತಮ್ಮ ಪ್ರಯಾಣ ಮುಂದುವರಿಸಲು ಮುಂದಾದ ಕಾರ್ಮಿಕರಲ್ಲಿ ಬಂಟರ ಭವನದಲ್ಲಿ ತಾತ್ಕಾಲಿಕವಾಗಿ ಉಳಿಯುವಂತೆ ಪೊಲೀಸರ ಜೊತೆ ಸೇರಿ ಮನವೊಲಿಸುವಲ್ಲಿ ಯಶಸ್ವಿಯಾದರು.









