ಮಂಗಳೂರು ಏರ್ ಪೋರ್ಟ್ ನ ನಿನ್ನೆಯ ಘಟನೆಗಳು ನಾಚಿಕೆಗೇಡು: ಎಸ್.ವೈ.ಎಸ್ ಖಂಡನೆ

ಎಮ್ಮೆಸ್ಸೆಂ ಝೈನೀ ಕಾಮಿಲ್
ಮಂಗಳೂರು : ಕೋವಿಡ್-19 ಹಿನ್ನೆಲೆಯಲ್ಲಿ ಯು.ಎ.ಇ.ಯಿಂದ ಬಂದ ಮೊದಲ ವಿಮಾನದಲ್ಲಿ ಮಂಗಳೂರು ಏರ್ ಪೋರ್ಟ್ ತಲುಪಿದ ಗರ್ಭಿಣಿಯರು, ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಪ್ರಯಾಣಿಕರಿಗೆ ನಿನ್ನೆ ವಿಮಾನ ನಿಲ್ದಾಣದಲ್ಲಿ ಉಂಟಾದ ದುರಾನುಭವಗಳು ಅತ್ಯಂತ ನಾಚಿಕೆಗೇಡಿನದ್ದು, ಇದು ಜಿಲ್ಲಾಡಳಿತದ ಸಂಪೂರ್ಣ ವೈಫಲ್ಯದ ಸಂಕೇತವೆಂದು ಸುನ್ನಿ ಯುವಜನ ಸಂಘ (ಎಸ್. ವೈ.ಎಸ್.) ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದ್ದು, ಘಟನೆಯನ್ನು ಖಂಡಿಸಿದೆ.
ಅವರೆಲ್ಲರೂ ರಜೆಯ ಖುಷಿಯಿಂದ ಊರಿಗೆ ಮರಳಿದವರಲ್ಲ. ತಮ್ಮ ಕೆಲಸ, ವ್ಯವಹಾರವನ್ನೆಲ್ಲ ಕಳಕೊಂಡು ಇಲ್ಲವೇ ತೀವ್ರ ನಷ್ಟ ಅನುಭವಿಸಿ ಶೂನ್ಯ ಭವಿಷ್ಯಕ್ಕೆ ದೃಷ್ಟಿ ನೆಟ್ಟು ನಿರಾಶರಾಗಿ ಬಂದ ಅನಿವಾಸಿಗಳು. ಅವರಿಗೆ ಬೇಕಾದ ಪ್ರಾಥಮಿಕ ವ್ಯವಸ್ಥೆ ಮಾಡಿಕೊಡಲು ಕೂಡಾ ಜಿಲ್ಲಾಡಳಿತದಿಂದ ಸಾಧ್ಯವಾಗದ್ದು ಖೇದಕರ. ರಮಝಾನ್ ತಿಂಗಳ ಉಪವಾಸ ಆಚರಿಸಿದ ಹಲವು ಯಾತ್ರಿಕರು, ಬೆಳಗ್ಗಿನಿಂದಲೇ ದುಬೈ ಏರ್ಪೋರ್ಟ್ ನಲ್ಲಿ ವಿವಿಧ ಪ್ರಕ್ರಿಯೆಗಳಲ್ಲಿ ಭಾಗಿಗಳಾಗಿ ತಡರಾತ್ರಿ ಮಂಗಳೂರು ತಲುಪಿದರೆ ಅಲ್ಲಿ ಒಂದು ಲೋಟ ನೀರಿಗೂ ಪರದಾಡಬೇಕಾದ ಅವಸ್ಥೆ. ಇಂತಹ ಸಂಕೀರ್ಣ ಪರಿಸ್ಥಿತಿ ಯಲ್ಲಿಯೂ ತಾರತಮ್ಯ ನೀತಿ ಪಾಲಿಸುವ ಈ ಕ್ರಮವನ್ನು ಇಡೀ ನಾಗರಿಕ ಸಮಾಜ ಖಂಡಿಸಬೇಕಾಗಿದೆ. ರಾಜ್ಯದ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಸ್ಥಳೀಯ ಸಂಸದರ ಊರಿನಲ್ಲಿಯೇ ಇಂತಹ ಘಟನೆಗಳು ನಡೆದಿರವುದು ಖೇದಕರ. ಮುಂದೆಯಾದರೂ ಸಂಬಂಧಪಟ್ಟವರು ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ಎಸ್.ವೈ.ಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಯವರು ಮಧ್ಯ ಪ್ರವೇಶಿಸಿ ಮುಂದಿನ ವಿಮಾನಗಳು ಬರುವ ವೇಳೆ ಹೀಗಾಗದಂತೆ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.





