ಉಡುಪಿ: ಎರಡು ಪ್ರಕರಣಗಳ ಎಲ್ಲಾ ಕೊರೋನ ಶಂಕಿತರ ವರದಿ ನೆಗೆಟಿವ್
ಉಡುಪಿ, ಮೇ 13: ಜಿಲ್ಲೆಯ ಮಟ್ಟಿಗೆ ತಲೆನೋವಾಗಿ ಪರಿಣಮಿಸಿದ್ದ ಎರಡು ಕೊರೋನ ಪಾಸಿಟಿವ್ ಪ್ರಕರಣಗಳ ಜಿಲ್ಲೆಯ ಸಂಪರ್ಕಿತ ವ್ಯಕ್ತಿಗಳೆ ಲ್ಲರ ಗಂಟಲು ದ್ರವ ಮಾದರಿಗಳ ವರದಿ ಇಂದು ನೆಗೆಟಿವ್ ಆಗಿ ಬಂದಿದ್ದು, ಇದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಮಂಗಳೂರಿನ ಕೊರೋನ ಹಾಟ್‌ಸ್ಪಾಟ್ ಎನಿಸಿದ ಫಸ್ಟ್ ನ್ಯೂರೋ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದವರು ಹಾಗೂ ಅಲ್ಲಿ ಪಾಸಿಟಿವ್ ಬಂದವರ ಸಂಪರ್ಕಕ್ಕೆ ಬಂದವರಲ್ಲಿ ಉಡುಪಿ ಜಿಲ್ಲೆಗೆ ಸೇರಿದ 17 ಮಂದಿಯ ಗಂಟಲುದ್ರವದ ಮಾದರಿಯ ವರದಿ ಬಂದಿದ್ದುವ ಎಲ್ಲವೂ ನೆಗೆಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇದರೊಂದಿಗೆ ಕಳೆದ ತಿಂಗಳು ತಮಿಳುನಾಡಿನಿಂದ ಕಾರ್ಕಳಕ್ಕೆ ಸಿಮೆಂಟ್ ತಂದು ಊರಿಗೆ ಮರಳಿದ ಬಳಿಕ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದ ತಮಿಳುನಾಡಿನ ಲಾರಿ ಚಾಲಕನ ಸಂಪರ್ಕಕ್ಕೆ ಬಂದ ಕಾರ್ಕಳ ಅಂಗಡಿಯ ಮಾಲಕ ಸೇರಿದಂತೆ ಐವರ ವರದಿ ಸಹ ನೆಗೆಟಿವ್ ಆಗಿವೆ. ಇದೇ ರೀತಿ ಉತ್ತರ ಕರ್ನಾಟಕಕ್ಕೆ ಹೋಗಿ ಬಂದ ಬಳಿಕ ಜ್ವರಕ್ಕೆ ತುತ್ತಾದ ಪಡುಬಿದ್ರಿ ವ್ಯಾಪಾರಿ ಯೊಬ್ಬರ ವರದಿ ನಿನ್ನೆ ನೆಗೆಟಿವ್ ಆಗಿ ಬಂದಿದೆ ಎಂದು ಡಿಎಚ್‌ಓ ತಿಳಿಸಿದರು.
70 ಮಂದಿಯ ಸ್ಯಾಂಪಲ್ ನೆಗೆಟಿವ್: ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಬುಧವಾರ ಬಂದ 70 ಮಂದಿಯ ವರದಿಗಳೆಲ್ಲವೂ ನೆಗೆಟಿವ್ ಆಗಿವೆ. ಬಾಕಿ ಉಳಿದಿರುವ ಮಾದರಿಗಳೊಂದಿಗೆ ಇಂದು ಕಳುಹಿಸಿದ 45 ಸ್ಯಾಂಪಲ್‌ಗಳು ಸೇರಿದಂತೆ ಒಟ್ಟು 62 ಸ್ಯಾಂಪಲ್‌ಗಳ ವರದಿ ಬರಲು ಾಕಿ ಇವೆ ಎಂದು ಅವರು ನುಡಿದರು.
ಇಂದು ಕೊರೋನ ರೋಗದ ಗುಣಲಕ್ಷಣವಿರುವ ಇನ್ನೂ 45 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ ಇಬ್ಬರು ಸಂಪರ್ಕಿತರು, ಇಬ್ಬರು ತೀವ್ರ ಉಸಿರಾಟ ತೊಂದರೆಯವರು, 24 ಮಂದಿ ಶೀತಜ್ವರದಿಂದ ಬಳಲುವವರು ಹಾಗೂ 17 ಮಂದಿ ಕೊರೋನ ಹಾಟ್‌ಸ್ಪಾಟ್‌ನಿಂದ ಬಂದವರ ಸ್ಯಾಂಪಲ್‌ಗಳು ಸೇರಿವೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಬುಧವಾರ ಸಂಜೆಯವರೆಗೆ ಒಟ್ಟು 1737 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1675ರ ವರದಿ ಬಂದಿದ್ದು, 1672 ನೆಗೆಟಿವ್ ಆಗಿವೆ. ಮೂರು ವರದಿಗಳು ಮಾತ್ರ ಪಾಸಿಟಿವ್ ಆಗಿ ಬಂದಿವೆ.
ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 13 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಒಬ್ಬರು ಕೋವಿಡ್ ಶಂಕಿತರು, 10 ಮಂದಿ ತೀವ್ರತರದ ಉಸಿರಾಟ ತೊಂದರೆಗೆ ಹಾಗೂ ಇಬ್ಬರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ದಾಖಲಾದವರಲ್ಲಿ 10 ಮಂದಿ ಪುರುಷರು, ಮೂವರು ಮಹಿಳೆಯರಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 22 ಮಂದಿ ಬಿಡುಗಡೆಗೊಂಡಿದ್ದು, 64 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ವಿವಿಧ ಹಿನ್ನೆಲೆಯೊಂದಿಗೆ ಬುಧವಾರ 40 ಮಂದಿ ಹೊಸದಾಗಿ ನೋಂದಣಿ ಮಾಡಿಕೊಂಡಿ ದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4378 ಮಂದಿಯನ್ನು ಕೊರೋನದ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2938 (ಇಂದು 69) ಮಂದಿ 28 ದಿನಗಳ ನಿಗಾವನ್ನೂ, 3628 (35) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಲೂ 671 ಮಂದಿ ಹೋಮ್ ಕ್ವಾರಂಟೈನ್ ಹಾಗೂ 15 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ನಿನ್ನೆ ರಾತ್ರಿ ದುಬಾಯಿಯಿಂದ ವಿಮಾನದಲ್ಲಿ ಬಂದ ಉಡುಪಿ ಜಿಲ್ಲೆಯ ಕನ್ನಡಿಗರಲ್ಲಿ 54 ಮಂದಿ ನಗರದ ಹೊಟೇಲ್ ಕ್ವಾರಂಟೈನ್‌ನಲ್ಲಿ ಹಾಗೂ ಒಬ್ಬರು ಸರಕಾರಿ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ವಿವರಿಸಿದರು.







