ಲಾಕ್ ಡೌನ್ ತೆರವಾದರೆ ಮತ್ತೊಮ್ಮೆ ಸಾಂಕ್ರಾಮಿಕ ಸ್ಫೋಟ: ಸಾಂಕ್ರಾಮಿಕ ರೋಗಗಳ ತಜ್ಞ ಎಚ್ಚರಿಕೆ

ವಾಶಿಂಗ್ಟನ್, ಮೇ 13: ಅವಧಿಗೆ ಮುಂಚಿತವಾಗಿಯೇ ಬೀಗಮುದ್ರೆ ತೆರವುಗೊಳಿಸಿದರೆ ಕೊರೋನ ವೈರಸ್ ಸಾಂಕ್ರಾಮಿಕವು ಇನ್ನೊಮ್ಮೆ ದಾಳಿ ನಡೆಸುವ ಅಪಾಯವಿದೆ ಎಂದು ಅಮೆರಿಕದ ಖ್ಯಾತ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆ್ಯಂಟನಿ ಫೌಸಿ ಮಂಗಳವಾರ ಎಚ್ಚರಿಸಿದ್ದಾರೆ.
ಅಮೆರಿಕದಲ್ಲಿ ಮಾರಕ ಸಾಂಕ್ರಾಮಿಕಕ್ಕೆ ಈಗಾಗಲೆ 80,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಹಾಗೂ ದೇಶದ ಆರ್ಥಿಕತೆ ನೆಲಕಚ್ಚಿದೆ.
ದೇಶದಲ್ಲಿ ಮಾರಕ ಸಾಂಕ್ರಾಮಿಕವು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಮೆರಿಕದ ಸೆನೆಟ್ ಸಮಿತಿಯ ಮುಂದೆ ವಿವರಣೆ ನೀಡಿದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್‌ಫೆಕ್ಶಿಯಸ್ ಡಿಸೀಸಸ್‌ನ ನಿರ್ದೇಶಕರೂ ಆಗಿರುವ ಅವರು ಹೇಳಿದರು.
ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ನನಗನಿಸುತ್ತಿದೆ. ಆದರೆ, ಸರಿಯಾದ ದಿಕ್ಕು ಎಂದರೆ, ನಾವು ಈ ಸಾಂಕ್ರಾಮಿಕದ ವಿರುದ್ಧ ಯಾವುದೇ ರೀತಿಯಲ್ಲಿ ಸಂಪೂರ್ಣ ನಿಯಂತ್ರಣ ಹೊಂದಿದ್ದೇವೆ ಎಂದು ಅರ್ಥವಲ್ಲ ಎಂದು ಫೌಸಿ ಹೇಳಿದರು.
ಫೌಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕೊರೋನ ವೈರಸ್ ಕಾರ್ಯಪಡೆಯ ಸದಸ್ಯರೂ ಆಗಿದ್ದಾರೆ.





