ಊರಿಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ವಾಹನ ಸೌಲಭ್ಯ ಕಲ್ಪಿಸಿ: ಬಾಂಬೆ ಹೈಕೋರ್ಟ್ ನಿರ್ದೇಶ

ಫೈಲ್ ಚಿತ್ರ
ನಾಗಪುರ,ಮೇ 13: ಹೆದ್ದಾರಿಗಳ ಮೇಲೆ ನಿಗಾಯಿರಿಸಲು ಮತ್ತು ತಮ್ಮ ತವರು ರಾಜ್ಯಗಳಿಗೆ ಕಾಲ್ನಡಿಗೆಯಿಂದ ಸಾಗುತ್ತಿರುವ ವಲಸೆ ಕಾರ್ಮಿಕರು ಮತ್ತು ಇತರರನ್ನು ರಾಜ್ಯದ ಗಡಿಯವರೆಗೆ ತಲುಪಿಸಲು ಪ್ರಯಾಣ ವ್ಯವಸ್ಥೆ ಕಲ್ಪಿಸಲು ವಿಶೇಷ ತಂಡಗಳನ್ನು ರೂಪಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠವು ಮಹಾರಾಷ್ಟ್ರದ ಎಲ್ಲಾ ಜಿಲ್ಲಾಧಿಕಾರಿಗಳು,ಮಂಡಳಿ ಅಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ನಿರ್ದೇಶ ನೀಡಿದೆ. ನ್ಯಾಯಾಲಯವು ಈ ಕಾರ್ಮಿಕರ ಬವಣೆಯ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು.
ನ್ಯಾಯಾಲಯದ ಆದೇಶದಂತೆ ಈ ವಿಶೇಷ ತಂಡಗಳು ಸಂಚಾರ ಸೌಲಭ್ಯವಿಲ್ಲದೆ ತಮ್ಮ ಊರುಗಳಿಗೆ ಮರಳಲು ಬವಣೆ ಪಡುತ್ತಿರುವ ವಲಸೆ ಕಾರ್ಮಿಕರು,ದಿನಗೂಲಿಗಳು ಮತ್ತು ಇತರರ ಬಗ್ಗೆ ಜಿಲ್ಲಾಧಿಕಾರಿಗಳು ಅಥವಾ ಪೊಲೀಸ್ ಆಯುಕ್ತರು ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡಲಿವೆ ಮತ್ತು ಈ ಅಧಿಕಾರಿಗಳು ಕಾರ್ಮಿಕರನ್ನು ರಾಜ್ಯದ ಗಡಿಯವರೆಗೆ ತಲುಪಿಸಲು ಬಸ್ಗಳ ವ್ಯವಸ್ಥೆ ಮಾಡುವಂತೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್ಆರ್ಟಿಸಿ)ಯನ್ನು ಕೋರಿಕೊಳ್ಳಲಿದ್ದಾರೆ.
ನ್ಯಾಯಾಲಯಕ್ಕೆ ನೆರವಾಗಲು ನೇಮಕಗೊಂಡಿರುವ ನ್ಯಾಯವಾದಿ ದೇವೆನ್ ಚೌಹಾಣ್ ಅವರು,ಹೆದ್ದಾರಿಗಳಲ್ಲಿ ಕೆಲವು ಸ್ಥಳಗಳನ್ನು ಬಸ್ ನಿಲುದಾಣಗಳನ್ನಾಗಿ ಗುರುತಿಸಬೇಕು ಮತ್ತು ಅಲ್ಲಿ ಬಸ್ಗಳನ್ನು ಲಭ್ಯವಾಗಿಸುವಂತೆ ಎಂಎಸ್ಆರ್ಟಿಸಿಗೆ ಸೂಚಿಸುವಂತೆ ಕೋರಿದರು. ವಲಸೆ ಕಾರ್ಮಿಕರಿಗಾಗಿ ಎಲ್ಲ ಮೂಲಸೌಕರ್ಯಗಳೊಡನೆ ತಾತ್ಕಾಲಿಕ ತಂಗು ಶಿಬಿರಗಳನ್ನು ಸ್ಥಾಪಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶ ನೀಡುವಂತೆಯೂ ಅವರು ಉಚ್ಚ ನ್ಯಾಯಾಲಯವನ್ನು ಕೇಳಿಕೊಂಡರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 15ರಂದು ನಡೆಸಲಿದೆ.







