ಸಶಸ್ತ್ರಪಡೆಗಳ ಸಿಬ್ಬಂದಿಗಳ ನಿವೃತ್ತಿ ವಯೋಮಾನ ಏರಿಕೆಯಾಗಲಿದೆ: ಸಿಡಿಎಸ್ ಜ.ರಾವತ್

ಹೊಸದಿಲ್ಲಿ,ಮೇ 13: ಸೇನೆಯ ಯೋಧರು, ಭಾರತೀಯ ವಾಯುಪಡೆಯಲ್ಲಿಯ ಏರ್‌ಮನ್‌ಗಳು ಮತ್ತು ಭಾರತೀಯ ನೌಕಾಪಡೆಯ ನಾವಿಕರ ನಿವೃತ್ತಿ ವಯೋಮಾನವು ವಿಸ್ತರಣೆಯಾಗಲಿದೆ ಮತ್ತು ಇದರಿಂದ ಮೂರೂ ಪಡೆಗಳ ಸುಮಾರು 15 ಲಕ್ಷ ಪುರುಷರಿಗೆ ಲಾಭವಾಗಲಿದೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜ.ಬಿಪಿನ್ ರಾವತ್ ಅವರು ತಿಳಿಸಿದ್ದಾರೆ.
ಆಂಗ್ಲ ದಿನಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಹೆಚ್ಚುತ್ತಿರುವ ವೇತನಗಳು ಮತ್ತು ಪಿಂಚಣಿಗಳು ಬಜೆಟ್‌ನ ಹೆಚ್ಚಿನ ಭಾಗವನ್ನು ಕಿತ್ತುಕೊಳ್ಳುತ್ತಿರುವುದರಿಂದ ಮಾನವ ಶಕ್ತಿ ವೆಚ್ಚಗಳ ಕಡಿತಕ್ಕೆ ಯೋಜಿಸಿದ್ದೀರಾ ಎಂಬ ಪ್ರಶ್ನೆಗೆ,‘ಮಾನವ ಶಕ್ತಿ ವೆಚ್ಚವನ್ನು ಕಡಿತಗೊಳಿಸುವ ಬಗ್ಗೆ ನಾನು ಪರಿಶೀಲಿಸುತ್ತಿದ್ದೇನೆ. ಯೋಧನೋರ್ವ 15 ಅಥವಾ 17 ವರ್ಷ ಮಾತ್ರ ಏಕೆ ಸೇವೆ ಸಲ್ಲಿಸಬೇಕು,ಆತ 30 ವರ್ಷಗಳ ಸೇವೆಯನ್ನೇಕೆ ಸಲ್ಲಿಸಬಾರದು? ಬೇಗ ನಿವೃತ್ತಿಯೊಂದಿಗೆ ನುರಿತ ಮಾನವ ಶಕ್ತಿಯನ್ನು ನಾವು ಕಳೆದುಕೊಳ್ಳುತ್ತಿದೇವೆ ’ಎಂದು ರಾವತ್ ಉತ್ತರಿಸಿದ್ದಾರೆ.
ಸೇನೆಯ ನೂತನ ನೀತಿಯು ಹೋರಾಟ ಪಡೆಗಳ ವಯೋಚಿತ್ರಣವನ್ನು ಬದಲಿಸಬಹುದು ಎಂಬ ಭೀತಿಯನ್ನು ತಳ್ಳಿಹಾಕಿದ ಅವರು,‘ಮುಂಚೂಣಿಯ ಹೋರಾಟದಲ್ಲಿ ಯುವಜನರೇ ಇರುತ್ತಾರೆ. ನಾವು ಆರ್ಮಿ ಮೆಡಿಕಲ್ ಕಾರ್ಪ್ಸ್ ಹೊಂದಿದ್ದೇವೆ,ನರ್ಸಿಂಗ್ ಸಹಾಯಕರೇಕೆ 50 ವರ್ಷ ಪ್ರಾಯದವರೆಗೆ ಸೇವೆ ಸಲ್ಲಿಸಬಾರದು’ ಎಂದು ಪ್ರಶ್ನಿಸಿದರು.





