ಕೊರೋನ ಸೋಂಕಿಗೊಳಗಾದ ಸೇನಾಧಿಕಾರಿ ಮೃತ್ಯು: ಆತ್ಮಹತ್ಯೆ ಶಂಕೆ

ಹೊಸದಿಲ್ಲಿ, ಮೇ 14: ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದ ಭಾರತೀಯ ಸೇನಾಧಿಕಾರಿಯೊಬ್ಬರು ದಿಲ್ಲಿಯ ಆಸ್ಪತ್ರೆಯ ಆವರಣದಲ್ಲಿ ಮೃತಪಟ್ಟಿದ್ದಾರೆ. ತನ್ನ ಅನಾರೋಗ್ಯದಿಂದ ಖಿನ್ನರಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಆದಾಗ್ಯೂ ಯಾವುದೇ ಆತ್ಮಹತ್ಯಾ ಪತ್ರ ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ.
31 ವರ್ಷ ವಯಸ್ಸಿನ ಮೃತ ಸೇನಾಧಿಕಾರಿ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೊಸದಿಲ್ಲಿಯ ಧೌಲಾ ಖುವಾನ್‌ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು. ಮೇ 5ರಂದು ದಿಲ್ಲಿಯ ನರೈನಾ ಆಸ್ಪತ್ರೆಯಲ್ಲಿ ಅವರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಬಂದಿತ್ತು ಎಂದು ಪಶ್ಚಿಮ ದಿಲ್ಲಿಯ ಉಪಪೊಲೀಸ್ ಆಯುಕ್ತ ದೀಪಕ್ ಪುರೋಹಿತ್ ತಿಳಿಸಿದ್ದಾರೆ.
ಮುಂಜಾನೆ 4:00 ಗಂಟೆಯ ವೇಳೆಗೆ ಆಸ್ಪತ್ರೆಯ ಕೋವಿಡ್ ವಾರ್ಡ್ನ ಹಿಂದುಗಡೆಯಿರುವ ಶೌಚಗೃಹದ ಹಿಂದಿರುವ ಮರಕ್ಕೆ ನೇಣುಬಿಗಿದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪುರೋಹಿತ್ ಹೇಳಿದ್ದಾರೆ. ಮಂಗಳವಾರದಂದು ಮುಂಜಾವ 1:00 ಗಂಟೆಗೆ ಅವರು ಆಸ್ಪತ್ರೆಯ ಹಿಂಭಾಗದ ಶೌಚಾಲಯಕ್ಕೆ ತೆರಳುತ್ತಿದ್ದುದನ್ನು ಇತರ ರೋಗಿಗಳು ಕಂಡಿದ್ದಾರೆಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದವರಾದ ಸೇನಾಧಿಕಾರಿ ಅವರು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲಲಿರುವ ಇಟಾರಾನಾ ಕಂಟೊನ್ಮೆಂಟ್‌ನಲ್ಲಿ ನಿಯೋಜಿತರಾಗಿದ್ದಾಗ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.







