ಬೆಂಗಳೂರು: ಮದೀನಾ ನಗರದ ಮಸೀದಿಗಳಿಂದ ಜಾಗೃತಿ
ಬೆಂಗಳೂರು, ಮೇ 13: ರೋಗಿ ನಂ.911ಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಬರದಂತೆ ತಡೆಯಲು ಮದೀನಾ ನಗರದ ಮಸೀದಿಗಳು ಕೂಡ ಮುಂದಾಗಿವೆ.
ಬಿಬಿಎಂಪಿ ವ್ಯಾಪ್ತಿಯ ಮಂಗಮ್ಮನ ಪಾಳ್ಯದ ಮದೀನಾ ನಗರದ ಟಿಪ್ಪು ಸರ್ಕಲ್ ನಿವಾಸಿಯಾದ ರೋಗಿ ನಂ.911, ನಾಲ್ಕು ದಿನಗಳಿಂದ ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದರು. ಮನೆಯ ಬಳಿಯಿರುವ ಕ್ಲಿನಿಕ್‍ನಲ್ಲಿ ಮೂರು ದಿನ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಡಾ. ಅವಿನಾಶ್ ಸಿಂಗ್ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಸೋಂಕಿತನ ಸೋದರ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚೆಕ್ ಅಪ್ ಮಾಡಿಸಿದ್ದರು. ಮಂಗಳವಾರ ಹೆಲ್ತ್ ಬುಲೆಟಿನ್‍ನಲ್ಲಿ ಈತನಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮದೀನಾ ನಗರದ ನಿವಾಸಿಗಳು ಸಾಕಷ್ಟು ಜಾಗರೂಕತೆ ವಹಿಸುತ್ತಿದ್ದಾರೆ.
ಕೊರೋನ ಸೋಂಕಿತನ ಮನೆಯ ಅಕ್ಕ ಪಕ್ಕದ ರಸ್ತೆಗಳನ್ನು ಸ್ವಯಂ ಬಂದ್ ಮಾಡಲಾಗಿದೆ. ಮನೆಯಿಂದ ಹೊರ ಬರುವವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಟಿಪ್ಪು ಸರ್ಕಲ್ ಸುತ್ತಲೂ ಇರುವ ನಾಲ್ಕು ಮಸೀದಿಗಳು ಪ್ರತಿ ಅರ್ಧ ಗಂಟೆಗೊಮ್ಮೆ ಮೈಕ್‍ನಲ್ಲಿ ಅನೌನ್ಸ್ ಮಾಡುತ್ತಿವೆ. ಮಸೀದಿ ಕಾರ್ಯದರ್ಶಿ ಹಾಗೂ ಸದಸ್ಯರು ಮನೆಯಿಂದ ಯಾರು ಹೊರಗಡೆ ಬರದಂತೆ ಮನವಿ ಮಾಡುತ್ತಿದ್ದಾರೆ.
ಸೋಂಕಿತನ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್‍ನಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಸೋಂಕಿತನ ಮನೆಯವರ ಜೊತೆಗೆ ಮಾತನಾಡಿದ್ದೇನೆ. ಲಾಕ್‍ಡೌನ್ ಆದಾಗಿನಿಂದಲೂ ಸೋಂಕಿತ ಮನೆಯಿಂದ ಎಲ್ಲೂ ಹೊರಗಡೆ ಹೋಗಿಲ್ಲ, ಜ್ವರ ಮಾತ್ರ ಕಾಣಿಸಿಕೊಂಡಿತ್ತು. ನಮ್ಮ ಮಸೀದಿಯಿಂದ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿ ಎಂದು ಆಯಿಷಾ ಮಸೀದಿಯ ಕಾರ್ಯದರ್ಶಿ ಚಾಂದ್ ತಿಳಿಸಿದ್ದಾರೆ.







