'ಲಾಕ್‍ಡೌನ್ ಸಡಿಲಿಕೆ, ಎಪಿಎಂಸಿ ಸುಗ್ರೀವಾಜ್ಞೆ': ಗುರುವಾರ ಸಚಿವ ಸಂಪುಟ ಸಭೆ
ಬೆಂಗಳೂರು, ಮೇ 13: ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಹೇರಿರುವ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆ, ಶ್ರಮಿಕ ವರ್ಗದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳ ಚರ್ಚೆ ಹಾಗೂ ಪರಿಹಾರ ಸಂಬಂಧ ನಾಳೆ(ಮೇ 14) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳು ಪಾಲ್ಗೊಳ್ಳಲಿದ್ದು, ಆರ್ಥಿಕ ಚಟುವಟಿಕೆ ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆ ಆರಂಭಿಸುವ ಸಂಬಂಧ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ.
ಜಿಲ್ಲಾವಾರು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸದೆ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಂಟೈನ್ಮೆಂಟ್ ವಲಯಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಕ್ಲಸ್ಟರುಗಳ ಸುತ್ತಲಿನ 50ರಿಂದ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿರುವ ಸಂಬಂಧ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ಅಲ್ಲದೆ, ಈ ಮಧ್ಯೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಜತೆಗೆ ಕಾರ್ಮಿಕರ ಕೆಲಸದ ಅವಧಿ 8ರಿಂದ 12 ಗಂಟೆಗೆ ಹೆಚ್ಚಳ ಮಾಡುವ ಸಂಬಂಧ ಕಾರ್ಮಿಕ ಕಾಯ್ದೆ ತಿದ್ದುಪಡಿ ಸಂಬಂಧದ ಸುಗ್ರೀವಾಜ್ಞೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.







