ಅನಿವಾಸಿ ಕನ್ನಡಿಗರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಟಿ.ಎಂ.ಶಾಹಿದ್ ಆಗ್ರಹ
ಬೆಂಗಳೂರು, ಮೇ 13: ಅನಿವಾಸಿ ಕನ್ನಡಿಗರ ಬಗ್ಗೆ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ಯುಎಇನಿಂದ ಆಗಮಿಸಿದ ಕರಾವಳಿ ಜನರ ಕ್ವಾರಂಟೈನ್‍ಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಅಕ್ಷಮ್ಯ. ಕೂಡಲೇ ಅವರಿಗೆ ಅಗತ್ಯ ಊಟ, ವಸತಿ ಸೌಲಭ್ಯ ಒದಗಿಸಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ಆಗ್ರಹಿಸಿದ್ದಾರೆ.
ನೆರೆಯ ಕೇರಳ ರಾಜ್ಯದಲ್ಲಿ ವಿದೇಶದಿಂದ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಎಲ್ಲ ನಾಗರಿಕರಿಗೆ ಕೇರಳ ಸರಕಾರವೇ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ. ಅವರ ಮನೆ ಮನೆಗೆ ತಲುಪಲು ವಾಹನ ವ್ಯವಸ್ಥೆ, ಉಚಿತ ಚಿಕಿತ್ಸೆ ನೀಡಿರುವುದು ಶ್ಲಾಘನೀಯ. ಕೇರಳ ರಾಜ್ಯದಲ್ಲಿ ಉತ್ತುಂಗ ಸ್ಥಿತಿಯಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಿಸಿದ್ದು, ಪ್ರಪಂಚಕ್ಕೆ ಮಾದರಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರಾವಳಿ ಜಿಲ್ಲೆಯ ಅನೇಕ ಅನಿವಾಸಿ ಕನ್ನಡಿಗರು ವಿದೇಶದಲ್ಲಿ ವೈದ್ಯರಾಗಿ, ಎಂಜಿನಿಯರ್‍ಗಳಾಗಿ, ಕಾರ್ಮಿಕರು ಹಾಗೂ ವ್ಯಾಪಾರಸ್ಥರಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮೂಲಕ ಭಾರತದ ಗೌರವ ಹೆಚ್ಚಿಸಿದ್ದಾರೆ. ಕೇಂದ್ರ ಸರಕಾರದ ಬಜೆಟ್‍ನ ಶೇ.10ರಷ್ಟು ಹಣ ಅನಿವಾಸಿ ಭಾರತೀಯರಿಂದ ಸಂಗ್ರಹವಾಗುತ್ತದೆ ಎಂದು ಅವರು ಗಮನ ಸೆಳೆದಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯದಿಂದ ಅನಿವಾಸಿನ ಕನ್ನಡಿಗರಿಗೆ ವಿಮಾನ, ಹಡಗು ಮತ್ತು ರೈಲ್ವೆ ವ್ಯವಸ್ಥೆ ಕಲ್ಪಿಸದ ಕಾರಣ ಸಂಕಷ್ಟಕ್ಕೆ ಸಿಲುಕಿದ ಜನರು ವಾಪಸ್ ಬರಲು ಸಾಧ್ಯವಾಗದೆ ಆತಂಕಕ್ಕೆ ಸಿಲುಕಿದ್ದಾರೆ. ಇದೀಗ ಅಲ್ಲಿಂದ ಮಂಗಳೂರಿಗೆ ಆಗಮಿಸಿದವರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸದಿರುವುದು ಸರಕಾರಕ್ಕೆ ಶೋಭೆಯಲ್ಲ. ಕೂಡಲೇ ಅನಿವಾಸಿ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.







