ಕೋವಿಡ್-19: ಮಕ್ಕಳ ಬಳಿಗೆ ಹೋಗಲಾಗದೇ ಕಣ್ಣೀರು ಹಾಕಿದ ಅಧಿಕಾರಿ
ಬೆಂಗಳೂರು, ಮೇ 13: ದಿನನಿತ್ಯ ಕೊರೋನ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವವರು ತಮ್ಮ ಮಕ್ಕಳ ಬಳಿ ಹೋಗಲಾರದೆ ಪರಿತಪಿಸುವಂತಾಗಿದ್ದು, ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ.
ಮಾರಣಾಂತಿಕ ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಕೊರೋನ ವಾರಿಯರ್ಸ್‍ಗಳ ಒಂದೊಂದೆ ಕಿನ್ನತೆಯ ಮುಖಗಳು ಅನಾವರಣಗೊಳ್ಳುತ್ತಿವೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಾಬಸ್‍ಪೇಟೆಯ ಖಾಸಗಿ ಸಭಾಂಗಣದಲ್ಲಿ ಕಂಡು ಬಂದ ದೃಶ್ಯವಿದು.
ಕೊರೋನ ವಾರಿಯರ್ಸ್‍ಗಳಿಗೆ ಅಭಿನಂದನೆ ಮತ್ತು ಪುಷ್ಪವೃಷ್ಟಿ ಕಾರ್ಯಕ್ರಮವನ್ನು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನೆಲಮಂಗಲ ತಾಲೂಕಿನ ನರಸೀಪುರ ಗ್ರಾಮ ಮಂಚಾಯಿತಿ ಅಧಿಕಾರಿ ಶೀಲಾ ತಮ್ಮ ಮಕ್ಕಳ ಬಳಿ ತೆರಳಲು ಆಗುತ್ತಿಲ್ಲ ಎಂದು ಕೆಲಕಾಲ ಗದ್ಗದಿತರಾದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಕೊರೋನ ವಾರಿಯರ್ಸ್ ಆಗಿ ಹಗಲಿರುಳು ದುಡಿಯುತ್ತಿರುವ ತಮಗೆ ಪುಟ್ಟಕಂದಮ್ಮ ಬಳಿ ತೆರಳಲು ಆಗುತ್ತಿಲ್ಲ ಎಂದು ಭಾವುಕರಾದರು. ಕೊರೋನ ಸೋಂಕು ಇಡಿ ವಿಶ್ವವನ್ನೇ ಘಾಸಿಗೊಳಿಸಿದ್ದು, ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಇತರ ಇಲಾಖೆಗಳ ಸಿಬ್ಬಂದಿಗಳು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ಪಿ.ಡಿ.ಓ ಅಳಲು ತೋಡಿಕೊಂಡರು.
ವೈದ್ಯರು ರೋಗಿಯ ಬಳಿಯೇ ಇರುತ್ತಾರೆ. ಕೊರೋನ ವೈರಾಣು ಹರಡುವ ಆತಂಕ ಎದುರಾಗಿದ್ದರೂ ಅದನ್ನು ಹೇಳಿಕೊಳ್ಳಲಾರದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾರೋ ಮಾಡಿರುವ ತಪ್ಪಿಗೆ ಇನ್ನೊಬ್ಬರು ಶಿಕ್ಷೆ ಅನುಭವಿಸುವಂತಾಗಿದೆ ಎಂದು ತಮ್ಮ ದು:ಖ ಹೊರಹಾಕಿದರು.







