ಮಾನವೀಯತೆ ಮೆರೆದ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್
ಬೆಂಗಳೂರು, ಮೇ 13: ಚೆನ್ನೈನಲ್ಲಿ ಮೃತಪಟ್ಟಿದ್ದ ಮಹಿಳೆಯೊಬ್ಬರ ಅಂತ್ಯ ಸಂಸ್ಕಾರಕ್ಕೆ ತೆರಳಲು ಕಷ್ಟಪಡುತ್ತಿದ್ದ ಇಬ್ಬರಿಗೆ ಎಸ್ಕಾರ್ಟ್ ನೀಡುವ ಮೂಲಕ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೆದ್ ಮಾನವೀಯತೆ ಮೆರೆದಿದ್ದಾರೆ.
ಪತ್ನಿಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಇಲ್ಲಿನ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತಿ ಮತ್ತು ಮಗ ಪರದಾಡುವಂತಾಗಿತ್ತು. ಈ ಇಬ್ಬರೂ ಬುಧವಾರ ಸಿಂಗಾಪುರದಿಂದ ಬೆಂಗಳೂರಿಗೆ ಬಂದು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದರು.
ಈ ಸಂದರ್ಭದಲ್ಲಿ ಪರದಾಡುತ್ತಿದ್ದ ತಂದೆ-ಮಗನಿಗೆ ಡಿಸಿಪಿ ಎಸ್ಕಾರ್ಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಏರ್ ಪೋರ್ಟ್‍ನಿಂದ ಅತ್ತಿಬೆಲೆಯ ತಮಿಳುನಾಡಿನ ಗಡಿವರೆಗೂ ಡಿಸಿಪಿ ವಾಹನದಲ್ಲಿ ಎಸ್ಕಾರ್ಟ್ ನೀಡಲಾಗಿದೆ.
ತಂದೆ ಚಂದ್ರಶೇಖರನ್, ಮತ್ತು ಮಗ ಅಬಿಷೇಕ್ ಅಂತ್ಯಕ್ರಿಯೆಗೆ ತೆರಳಲು ಪರದಾಡುತ್ತಿದ್ದರು. ಕೊನೆಗೆ ಇಲಾಖೆ ವಾಹನದಲ್ಲಿ ಎಸ್ಕಾರ್ಟ್ ನೀಡಿದ ಡಿಸಿಪಿ, ತಾವು ಖಾಸಗಿ ವಾಹನದಲ್ಲಿ ತೆರಳಿದರು. ತಂದೆ-ಮಗ ಇಬ್ಬರೂ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನೈಗೆ ಪ್ರಯಾಣ ಬೆಳೆಸಿದರು.





