ಆತಂಕಕ್ಕೆ ಕಾರಣವಾಗಿದ್ದ ಸೂಟ್ ಕೇಸ್ ಖಾಲಿ: ನಿಟ್ಟುಸಿರು ಬಿಟ್ಟ ಚಿಕ್ಕಮಗಳೂರು ಜನತೆ
ಮಂಗಳೂರಿನ ಬಿಡಿಡಿಎಸ್ ತಂಡದಿಂದ ಪರಿಶೀಲನೆ

ಚಿಕ್ಕಮಗಳೂರು, ಮೇ 14: ಮಹಿಳೆಯೊಬ್ಬರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಇಟ್ಟಿದ್ದ ಸೂಟ್ ಕೇಸ್ನ್ನು ಮಂಗಳೂರಿನಿಂದ ಆಗಮಿಸಿದ ಪರಿಣಿತರ ತಂಡ ಬುಧವಾರ ರಾತ್ರಿ ಕಾರ್ಯಚರಣೆ ನಡೆಸಿ ಪರಿಶೀಲಿಸಿದ್ದು, ನಗರದ ಜನರಲ್ಲಿ ಭೀತಿಗೆ ಕಾರಣವಾಗಿದ್ದ ಸೂಟ್ ಕೇಸ್ ಖಾಲಿಯಾಗಿತ್ತು. ಅದರಲ್ಲಿ ಯಾವುದೇ ಸ್ಫೋಟಕಗಳಿರಲಿಲ್ಲ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ನಡೆದ ಘಟನೆಯಿಂದ ನಗರದ ಜನರಲ್ಲಿ ಆತಂಕ ಮೂಡಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ಸೂಟ್ ಕೇಸ್ ಇರಿಸಿದ್ದ ಸ್ಥಳಕ್ಕೆ ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದ್ದರು. ಸೂಟ್ ಕೇಸ್‍ನಲ್ಲಿ ಸ್ಫೋಟಕ ವಸ್ತುಗಳು ಇರಬಹುದೆಂಬ ಶಂಕೆ ಮೇರೆಗೆ ನಗರದ ಶಸಸ್ತ್ರ ಮೀಸಲು ಪಡೆಯ ಕವಾಯತು ಮೈದಾನಕ್ಕೆ ಕೊಂಡ್ಯೊಯ್ದು ಭದ್ರತೆಯಲ್ಲಿ ಇರಿಸಲಾಗಿತ್ತು.
ಘಟನೆ ಸಂಬಂಧ ಜಿಲ್ಲಾ ಪೊಲೀಸರು ಮಂಗಳೂರಿನ ಬಿಡಿಡಿಎಸ್ ತಂಡಕ್ಕೆ ಮಾಹಿತಿ ರವಾನಿಸಿ ತಂಡವನ್ನು ನಗರಕ್ಕೆ ಕರೆಸಿಕೊಳ್ಳಲಾಗಿತ್ತು. ಸ್ಥಳಕ್ಕೆ ಆಗಮಿಸಿದ ತಂಡ ಮಧ್ಯರಾತ್ರಿ 3ರ ವೇಳೆ ಕೊರ್ಡೆಕ್ಸ್ ವಿಧಾನದಲ್ಲಿ ಸೂಟ್ ಕೇಸ್ ತೆರದು ನೋಡಿದಾಗ ಸೂಟ್ ಕೇಸ್‍ನಲ್ಲಿ ಯಾವುದೇ ವಸ್ತುಗಳಿಲ್ಲದೇ ಖಾಲಿಯಾಗಿತ್ತೆಂದು ತಿಳಿದುಬಂದಿದ್ದು, ಸೂಟ್ ಕೇಸ್ ತೆರೆದು ನೋಡಿದಾಗ ಯಾವುದೇ ಸ್ಫೊಟಕ ವಸ್ತುಗಳು ಇಲ್ಲದಿರುವುದು ಕಂಡು ಬಂದಿದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮನೆಯಲ್ಲಿದ್ದ ಹಳೆಯ ಸೂಟ್ ಕೇಸ್ ಅನ್ನು ನಗರಸಭೆ ಗಾಡಿ ಅಥವಾ ಯಾರಾದರೂ ತೆಗೆದುಕೊಂಡು ಹೋಗಲಿ ಎಂಬ ಉದ್ದೇಶದಿಂದ ಮಹಿಳೆ ಮರದ ಕೆಳಗೆ ಇಟ್ಟಿರಬಹುದು ಎಂದು ಸಾರ್ವಜನಿಕರ ಅಭಿಪ್ರಾಯಿಸಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ಮಹಿಳೆಯ ನಡೆಯಿಂದ ಜನರಲ್ಲಿ ಆತಂಕ ಮೂಡಿತ್ತು.







