ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 987ಕ್ಕೆ ಏರಿಕೆ: ಒಟ್ಟು 35 ಮಂದಿ ಸಾವು
ಇದುವರೆಗೆ 460 ಮಂದಿ ಸಂಪೂರ್ಣ ಗುಣಮುಖ

ಬೆಂಗಳೂರು, ಮೇ.14: ರಾಜ್ಯದಲ್ಲಿ ಒಂದೇ ದಿನ 28 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 987ಕ್ಕೆ ಏರಿಕೆಯಾಗಿದೆ. ಅಲ್ಲದೇ, ದಕ್ಷಿಣ ಕನ್ನಡದ 80 ವರ್ಷದ ಮಹಿಳೆ ಮತ್ತು ಬೆಂಗಳೂರಿನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಂದ್ರ ಪ್ರದೇಶ ಮೂಲದ 60 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿರುವ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಬುಧವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆವರೆಗಿನ ಅವಧಿಯಲ್ಲಿ ಒಟ್ಟು 28 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ ಎಂದು ತಿಳಿಸಲಾಗಿದೆ. ಇದೇ ಅವಧಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 35ಕ್ಕೆ ಏರಿದೆ.
ಈ ಪೈಕಿ ಬೀದರ್ ನಲ್ಲಿ 7 ಮಂದಿ, ಮಂಡ್ಯದಲ್ಲಿ 5, ಬೆಂಗಳೂರು ನಗರದಲ್ಲಿ 5, ಗದಗ 4, ದಾವಣಗೆರೆ 3, ಕಲಬುರಗಿ 2 ಹಾಗು ಬೆಳಗಾವಿ, ಬಾಗಲಕೋಟೆಯಲ್ಲಿ ತಲಾ ಒಂದೊಂದು ಕೊರೋನ ಸೋಂಕು ಪ್ರಕರಣ ದೃಢಪಟ್ಟಿದೆ.
ಜೊತೆಗೆ, ಕಲಬುರಗಿಯಲ್ಲಿ ಇಬ್ಬರು, ಮೈಸೂರಿನಲ್ಲಿ ಇಬ್ಬರು, ಬೆಂಗಳೂರು ನಗರದಲ್ಲಿ ಇಬ್ಬರು, ದಕ್ಷಿಣ ಕನ್ನಡದಲ್ಲಿ ಇಬ್ಬರು, ವಿಜಯಪುರದಲ್ಲಿ ಇಂದು ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟಾರೆ ಇದುವರೆಗೆ ಸೋಂಕು ದೃಢಪಟ್ಟ 987 ಮಂದಿಯ ಪೈಕಿ 460 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 35 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 83, ಬೆಳಗಾವಿ 72, ದಾವಣಗೆರೆ 82, ಮೈಸೂರು 2, ಕಲಬುರಗಿ 30, ಬಾಗಲಕೋಟೆ 41, ಬೀದರ್ 33, ಉತ್ತರ ಕನ್ನಡ 30 ಸೇರಿದಂತೆ ರಾಜ್ಯಾದ್ಯಂತ 491 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.







