ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಕ ಬಂಧನ ಖಂಡಿಸಿ ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಪ್ರತಿಭಟನೆ

ಬೆಂಗಳೂರು, ಮೇ 14: ಮಾನವ ಹಕ್ಕು ಹೋರಾಟಗರರಾಗಿರುವ ಡಾ.ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಾಕ ಅವರ ಬಂಧನ ವಿರೋಧಿಸಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆಯಿತು.
ಗುರುವಾರ ಬೆಂಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ದಸಂಸ ಸದಸ್ಯರು, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಬಂಧಿತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಮಾವಳ್ಳಿ ಶಂಕರ್, ತಳ ಸಮುದಾಯಗಳ ಧ್ವನಿ, ನಾಗರಿಕ ಹಕ್ಕುಗಳು ಹಾಗೂ ಶಿಕ್ಷಣ ಹಕ್ಕುಗಳ ಪ್ರತಿಪಾದಕರಾದ ಪ್ರೊ.ಆನಂದ್ ತೇಲ್ತುಂಬ್ಡೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಕ ಅವರನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ಉದ್ದೇಶಪೂರ್ವಕವಾಗಿ ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಎನ್‍ಐಎ ಬಂಧಿಸಿರುವುದು ಖಂಡನೀಯ ಎಂದರು.
ಇಂದಿಗೆ(ಮೇ-14ಕ್ಕೆ) ಅವರ ಬಂಧನವಾಗಿ ಒಂದು ತಿಂಗಳು ಕಳೆಯುತ್ತದೆ. ಸಾಮಾಜಿಕ ಹೋರಾಟಗಾರರನ್ನು ಈ ರೀತಿ ಬಂಧಿಸಿ ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಮೂಲಕ, ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕಲು ಪ್ರಭುತ್ವ ಯತ್ನಿಸುತ್ತಿದೆ ಎಂದು ಮಾವಳ್ಳಿ ಶಂಕರ್ ದೂರಿದರು.
ಮಂಡ್ಯ: ಕಪ್ಪುಪಟ್ಟಿ ಧರಿಸಿ ಧರಣಿ
ಮಂಡ್ಯ: ಸಾಮಾಜಿಕ ಹೋರಾಟಗಾರರ ಬಂಧನ ಖಂಡಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು.
ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಸಾಮಾಜಿಕ ಚಿಂತಕರು, ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆ ಮಾಡಿ, ಪ್ರಕರಣಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಆನಂದ್ ತೇಲ್ತುಂಬ್ಡೆ ಸೇರಿದಂತೆ ಹಲವು ಸಾಮಾಜಿಕ ಚಿಂತಕರನ್ನು ಕೇಂದ್ರ ಸರಕಾರ ಬಂಧಿಸಿ ಕಿರುಕುಳ ನೀಡುತ್ತಿದೆ. ಆ ಮೂಲಕ ಪ್ರಗತಿಪರರ ಹೋರಾಟವನ್ನು ದಮನಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.
ದಲಿತ ಚಿಂತಕರು ಮತ್ತು ಸಾಮಾಜಿಕ ಹೋರಾಟಗಾರರು ದೇಶದ್ರೋಹಿಗಳಲ್ಲ, ಅವರೇ ನಿಜವಾದ ದೇಶಪ್ರೇಮಿಗಳು. ಆದರೆ, ಅವರಿಗೆ ಕೇಂದ್ರದ ಬಿಜೆಪಿ ಸರಕಾರ ದೇಶದ್ರೋಹ ಪಟ್ಟಕಟ್ಟಿ ಅಕ್ರಮವಾಗಿ ಬಂಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆನಂದ್ ತೇಲ್ತುಂಬ್ಡೆ ಸೇರಿದಂತೆ ಎಲ್ಲಾ ಸಾಮಾಜಿಕ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಹಾಗೆಯೇ ದಲಿತ, ಜನಸಾಮಾನ್ಯರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್, ಜಿಲ್ಲಾ ಮುಖಂಡರಾದ ಕೆಂಪಯ್ಯ ಸಾಗ್ಯ, ರಾಜಣ್ಣ, ಅಂದಾನಿ ಸೋಮನಹಳ್ಳಿ, ಕುಬೇರಪ್ಪ, ರಮಾನಂದ ತರೀಕೆರೆ ಕಾಲನಿ, ಪ್ರಸನ್ನ ಇಂಡುವಾಳು, ವಿಜಯಲಕ್ಷ್ಮಿ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.
ಮೈಸೂರಿನಲ್ಲಿ ಮೌನ ಪ್ರತಿಭಟನೆ
ಮೈಸೂರು: ಪ್ರಗತಿಪರ ಚಿಂತಕ, ಸಾಮಾಜಿಕ ಹೋರಾಟಗಾರ ಡಾ.ಆನಂದ್ ತೇಲ್ತುಂಬ್ಡೆ ಅವರನ್ನು ದುರುದ್ದೇಶಪೂರ್ವಕವಾಗಿ ಬಂಧಿಸಲಾಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಆನಂದ್ ತೇಲ್ತುಂಬ್ಡೆ ಅವರನ್ನು ಬಿಡುಗೆಡೆಗೊಳಿಸಬೇಕು, ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ದುರುದ್ದೇಶದಿಂದ ಸುಳ್ಳು ಕೇಸಿನಲ್ಲಿ ಡಾ.ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಿ ಒಂದು ತಿಂಗಳಾಗಿರುವ ಸಂದರ್ಭದಲ್ಲಿ ಅದನ್ನು ಖಂಡಿಸಿ ನಾವಿಂದು ಪ್ರತಿಭಟನೆ ನಡೆಸುತ್ತಿದ್ದೇವೆ. ಕೊರೋನ ಸಂದರ್ಭದಲ್ಲಿ ಯಾರನ್ನೂ ಬಂಧಿಸದೇ, ಜೈಲಿನಲ್ಲಿರುವವರನ್ನೂ ಬಿಡುಗಡೆ ಮಾಡುತ್ತಿರುವ ನಡೆದೇ ಇರದ ಪ್ರಕರಣವೊಂದರಲ್ಲಿ ದೇಶದ ಮೇಧಾವಿಯೊಬ್ಬರನ್ನು ಬಂಧಿಸಿರುವುದು ದೊಡ್ಡ ಹುನ್ನಾರವಾಗಿದೆ ಪ್ರತಿಭಟನಾಕಾರರು ಎಂದು ಆರೋಪಿಸಿದರು.
ಮಾತಿನ ಚಕಮಕಿ: ಡಾ.ಆನಂದ್ ತೇಲ್ತುಂಬ್ಡೆ ಬಂಧನ ಖಂಡಿಸಿ ಮತ್ತು ಬಿಡುಗಡೆಗೆ ಒತ್ತಾಯಿಸಿ ಪುರಭವನದ ಮುಂಭಾಗ ಪ್ರತಿಭಟನಾಕಾರರು ಜಮಾಯಿಸುತ್ತಿದ್ದಂತೆಯೇ ಪೊಲೀಸರು ತಡೆದರು. ಇದೇ ವೇಳೆ ಪ್ರತಿಭಟನಾಕರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಇದೇ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಆಲಗೋಡು ಶಿವಕುಮಾರ್, ನಾವು ಮೌನವಾಗಿ ಪ್ರತಿಭಟಿಸಲಿದ್ದೇವೆ. ಹಾಗಾಗಿ ನಮಗೆ ಅವಕಾಶ ಮಾಡಬೇಕು ಎಂದು ಹೇಳಿದರು. ಆದರೆ ಪೊಲೀಸರು ಮೇ.17 ರ ವರೆಗೆ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ ನಾಲ್ಕು ಮಂದಿಗಿಂತ ಹೆಚ್ಚು ಜನರು ಸೇರುವಂತಿಲ್ಲ, ಹಾಗಾಗಿ ಹೊರಡುವಂತೆ ಹೇಳಿದರು. ಆದರೂ ಪಟ್ಟು ಬಿಡದ ಪ್ರತಿಭಟನಾಕರರು ಹತ್ತು ನಿಮಿಷಗಳಲ್ಲಿ ಪ್ರತಿಭಟನೆ ನಡೆಸಿ ನಿರ್ಗಮಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಆಲಗೋಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪ.ಮಲ್ಲೇಶ್, ಜನಾರ್ಧನ್ ಜನ್ನಿ, ಕೆ.ದೀಪಕ್, ಮಲ್ಲಹಳ್ಳಿ ನಾರಾಯಣ್, ಲ.ಜಗನ್ನಾಥ್, ರಾಜಶೇಖರ ಕೋಟೆ, ಕಾರ್ಯಬಸವಣ್ಣ, ಕಲ್ಲಹಳ್ಳಿ ಕುಮಾರ್, ಮಹದೇವಸ್ವಾಮಿ ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ವೇಣು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೋರಾಟಗಾರ ಡಾ.ಆನಂದ್ ತೇಲ್ತುಂಬ್ಡೆ ಅವರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ನಡೆಯಲಿದೆ. ಆ ನಿಟ್ಟಿನಲ್ಲಿ ದಸಂಸ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಿದೆ.
-ಕಲ್ಲಹಳ್ಳಿ ಕುಮಾರ್, ದಸಂಸ ತಾಲೂಕು ಅಧ್ಯಕ್ಷ, ಮೈಸೂರು







