ಬಿಬಿಎಂಪಿ ಬಜೆಟ್‍ಗೆ ಸರಕಾರ ಅನುಮೋದನೆ: 254.35 ಕೋಟಿ ರೂ. ಅನುದಾನ ಕಡಿತ

ಬೆಂಗಳೂರು, ಮೇ 14: ಕಳೆದ ಮೇ 7ರಂದು ಮಂಡನೆಯಾಗಿದ್ದ ಬಿಬಿಎಂಪಿ ಬಜೆಟ್‍ಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು, ಕೊರೋನ ಲಾಕ್‍ಡೌನ್ ಹಿನ್ನೆಲೆ 254.35 ಕೋಟಿ ರೂ. ಅನುದಾನ ಕಡಿತಗೊಳಿಸಿದೆ.
ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ 11,969.5 ಕೋಟಿ ಮೊತ್ತದ ಬಜೆಟ್‍ಅನ್ನು ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿತ್ತು. ಬಿಬಿಎಂಪಿಯು ಅನುಮೋದನೆಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಹಲವು ಮಾರ್ಪಾಡುಗಳೊಂದಿಗೆ ಅನುಮೋದನೆ ನೀಡಿದ್ದು, ಪರಿಷ್ಕೃತ ಆಯವ್ಯಯದಲ್ಲಿ ಸುಮಾರು 254.35 ಕೋಟಿ ರೂ. ಕಡಿತ ಮಾಡಿದೆ.
ನಗರಾಭಿವೃದ್ಧಿ ಇಲಾಖೆಯು ಹಲವು ಅನಗತ್ಯ ಮತ್ತು ಪುನರಾವರ್ತಿತ ಯೋಜನೆಗಳಿವೆ ಎಂಬ ಕಾರಣಕ್ಕೆ 254.35 ಕೋಟಿ ರೂ. ಕಡಿತಗೊಳಿಸಿ, 11,715.2 ಕೋಟಿ ರೂ. ಆಯವ್ಯಯಕ್ಕೆ ಅನುಮೋದನೆ ನೀಡಿದೆ.
ಪರಿಷ್ಕೃತ ಬಜೆಟ್‍ನಲ್ಲಿ ರಸ್ತೆಗುಂಡಿ ದುರಸ್ತಿಗೆ ನೀಡಿದ್ದ 120 ಕೋಟಿ ರೂ.ನಿಂದ 5 ಕೋಟಿ ರೂ. ಸೀಮಿತಗೊಳಿಸಲಾಗಿದೆ. ಅದೇ ರೀತಿ, ಮಳೆ ನೀರುಗಾಲುವೆ ವಾರ್ಷಿಕ ನಿರ್ವಹಣೆಗೆ ಎಸೊ ಖಾತೆಯಲ್ಲಿ ಮೀಸಲಿಟ್ಟಿದ್ದ 75 ಕೋಟಿಯನ್ನು 25 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಜತೆಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 75 ಕೋಟಿ ರೂ. ನೀಡಲಾಗಿತ್ತು. ಅದನ್ನು 50 ಕೋಟಿ ರೂ. ಗಳಿಗೆ ಇಳಿಸಲಾಗಿದೆ.
ಬೆಳ್ಳಂದೂರು ಮತ್ತು ವರ್ತೂರು ಕೆರೆ ಅಭಿವೃದ್ಧಿಗಾಗಿ ಬಿಬಿಎಂಪಿಯಿಂದ ಬಿಡಿಎಗೆ ಪ್ರಸ್ತಾವಿತ ಬಜೆಟ್‍ನಲ್ಲಿ ಯಾವುದೇ ಸಹಾಯಧನ ಮೀಸಲಿಟ್ಟಿರಲಿಲ್ಲ. ಪರಿಷ್ಕೃತದಲ್ಲಿ ಕ್ರಮವಾಗಿ 25 ಕೋಟಿ ರೂ. ಹಾಗೂ 20 ಕೋಟಿ ರೂ. ನೀಡಲಾಗಿದೆ. ಅಲ್ಲದೆ, ಉತ್ತರಹಳ್ಳಿಯ ಬ್ರಿಗೇಡ್ ಅಪಾರ್ಟ್‍ಮೆಂಟ್ ಹತ್ತಿರದ ಬೃಹತ್ ನೀರುಗಾಲುವೆ ಅಭಿವೃದ್ಧಿಗೆ 10 ಕೋಟಿ ರೂ. ಮೀಸಲಿಡಲಾಗಿದೆ.
ಇತಿಹಾಸದಲ್ಲೆ ಮೊದಲ ಬಾರಿ ಕಳೆದ ಮೇ 7ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಾಗಿತ್ತು. ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ ಒಟ್ಟು 11,969.5 ಕೋಟಿ ರೂಪಾಯಿ ಮೊತ್ತದ ಆಯವ್ಯಯ ಮಂಡನೆ ಮಾಡಿದ್ದರು.
ಬಜೆಟ್‍ನಲ್ಲಿದ 254.35 ಕೋಟಿಯಷ್ಟು ಕಡಿತಗೊಳಿಸಿದ ರಾಜ್ಯ ಸರಕಾರ, ಉಳಿದ ಒಟ್ಟು 11,715.2 ಕೋಟಿ ರೂ. ಬಜೆಟ್‍ಗೆ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಿದೆ. ಜೊತೆಗೆ 2019-20ನೇ ಸಾಲಿನ ಪರಿಷ್ಕೃತ ಬಜೆಟ್ ಅಂಗೀಕರಿಸಿದೆ.







