ಉಡುಪಿ: ಹೊರ ರಾಜ್ಯಗಳಿಂದ ಮತ್ತೆ 274 ಮಂದಿ ಜಿಲ್ಲೆಗೆ
ಉಡುಪಿ, ಮೇ 14: ದೇಶಾದ್ಯಂತ ಲಾಕ್‌ಡೌನ್ ಬಳಿಕ ಹೊರರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ 274 ಮಂದಿ ಗುರುವಾರ 12 ನಿಗದಿತ ಚೆಕ್‌ಪೋಸ್ಟ್‌ಗಳ ಮೂಲಕ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ್ದು, ನಾಲ್ಕು ತಾಲೂಕುಗಳಿಗೆ ತೆರಳಿದ್ದಾರೆ ಎಂದು ಇಲ್ಲಿಗೆ ಬಂದಿರುವ ಮಾಹಿತಿಗಳು ತಿಳಿಸಿವೆ.
ಇವರಲ್ಲಿ ಮಹಾರಾಷ್ಟ್ರದ 155 ಮಂದಿ ಕುಂದಾಪುರ ತಾಲೂಕಿಗೂ, ಆಂಧ್ರ (3) ಮತ್ತು ಮಹಾರಾಷ್ಟ್ರ (50)ಗಳ ಒಟ್ಟು 53 ಮಂದಿ ಬೈಂದೂರಿಗೂ, ಮಹಾರಾಷ್ಟ್ರ (10), ಮಧ್ಯಪ್ರದೇಶ (1), ರಾಜಸ್ಥಾನ (2)ಗಳ 53 ಮಂದಿ ಕಾಪು ತಾಲೂಕಿಗೆ, ಮಹಾರಾಷ್ಟ್ರ (46), ತೆಲಂಗಾಣ (1), ಕೊಲ್ಕತ್ತಾ (6)ಗಳ ಒಟ್ಟು 53 ಮಂದಿ ಉಡುಪಿ ತಾಲೂಕಿಗೆ ಆಗಮಿಸಿದ್ದಾರೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.
ಸರಕಾರ ಲಾಕ್‌ಡೌನ್ ಸಡಿಲಿಸಿ ಹೊರರಾಜ್ಯದವರಿಗೆ ರಾಜ್ಯ ಪ್ರವೇಶಿಸಲು ಆನ್‌ಲೈನ್ ಮೂಲಕ ಅನುಮತಿ ನೀಡಲಾರಂಭಿಸಿದ ಬಳಿಕ ಮೇ 4ರಿಂದ ಈವರೆಗೆ ಒಟ್ಟು 3596 ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಇವರಲ್ಲಿ ಪುರುಷರು 2359 ಮಂದಿ, ಮಹಿಳೆಯರು 992 ಮಂದಿ ಹಾಗೂ ಮಕ್ಕಳು 245 ಮಂದಿ ಸೇರಿದ್ದಾರೆ.
ಈವರೆಗೆ ಕುಂದಾಪುರ ತಾಲೂಕಿಗೆ 726 ಮಂದಿ, ಬೈಂದೂರಿಗೆ-1473, ಕಾರ್ಕಳಕ್ಕೆ-775, ಕಾಪು-137, ಬ್ರಹ್ಮಾವರ-219, ಉಡುಪಿ-264 ಹಾಗೂ ಹೆಬ್ರಿಗೆ ಇಬ್ಬರು ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ ಎಂದು ವರದಿ ತಿಳಿಸಿದೆ.







