ಕೊಲ್ಲಿಸುವುದಾಗಿ ನೀರವ್ ಮೋದಿ ಬೆದರಿಕೆ ಹಾಕಿದ್ದರು
ಬ್ರಿಟನ್ ನ್ಯಾಯಾಲಯಕ್ಕೆ ವಜ್ರದ ವ್ಯಾಪಾರಿಯ ಕಂಪೆನಿಗಳ ನಿರ್ದೇಶಕರ ಹೇಳಿಕೆ

ಲಂಡನ್, ಮೇ 14: ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ರೂಪಾಯಿಗಳನ್ನು ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ, ತಮ್ಮನ್ನು ಕಳ್ಳತನದ ಆರೋಪಗಳಲ್ಲಿ ಸಿಲುಕಿಸುವ ಹಾಗೂ ಕೊಲ್ಲಿಸುವ ಬೆದರಿಕೆಗಳನ್ನು ಹಾಕುತ್ತಿದ್ದರು ಎಂದು ನೀರವ್ ಮೋದಿಯೊಂದಿಗೆ ನಂಟು ಹೊಂದಿರುವ ಕಂಪೆನಿಗಳ ಹೆಸರಿಗೆ ಮಾತ್ರವಾಗಿರುವ ನಿರ್ದೇಶಕರು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
ನೀರವ್ ಮೋದಿ ವಿರುದ್ಧ ದಾಖಲಾಗಿರುವ ಬ್ಯಾಂಕ್‌ಗಳಿಗೆ ವಂಚನೆ ಮತ್ತು ಹಣ ವರ್ಗಾವಣೆ ಮೊಕದ್ದಮೆಯಲ್ಲಿ ಆರು ಮಂದಿ ಭಾರತೀಯರು ವೀಡಿಯೊ ಮೂಲಕ ಈ ವಾರ ನಡೆದ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಭಾರತೀಯರ ಹೇಳಿಕೆಗಳನ್ನೊಳಗೊಂಡ ವೀಡಿಯೊವನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನ್ಯಾಯಾಲಯಕ್ಕೆ ಸಲ್ಲಿಸಿದೆ.
ದುಬೈ ತೊರೆದು ಈಜಿಪ್ಟ್ ರಾಜಧಾನಿ ಕೈರೋಗೆ ಬರುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿತ್ತು ಎಂದು ಈ ಆರೂ ಮಂದಿ ಹೇಳಿದ್ದಾರೆ. ಕೈರೋದಲ್ಲಿ ತಮ್ಮ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಲಾಗಿತ್ತು ಹಾಗೂ ಅಲ್ಲಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಸಂಶಯಾಸ್ಪದ ದಾಖಲೆಗಳಿಗೆ ಸಹಿ ಹಾಕುವಂತೆ ನೀರವ್ ಮೋದಿಯ ಸಹೋದರ ನೇಹಲ್ ಮೋದಿ ತಮ್ಮ ಮೇಲೆ ಒತ್ತಡ ಹಾಕಿದ್ದರು ಎಂದು ಅವರು ಆರೋಪಿಸಿದ್ದಾರೆ.
“ನನ್ನ ಹೆಸರು ಆಶಿಶ್ ಕುಮಾರ್ ಮೋಹನ್‌ಭಾಯ್ ಲಾಡ್. ನಾನು ಹಾಂಕಾಂಗ್‌ನ ಸನ್‌ಶೈನ್ ಜಮ್ಸ್ ಲಿಮಿಟೆಡ್ ಮತ್ತು ದುಬೈಯ ಯೂನಿಟಿ ಟ್ರೇಡಿಂಗ್ ಎಫ್‌ಝಡ್‌ಇ ಕಂಪೆನಿಗಳ ಹೆಸರಿಗೆ ಮಾತ್ರ ಮಾಲೀಕನಾಗಿದ್ದೆ” ಎಂದು ವೀಡಿಯೊದಲ್ಲಿ ಒಬ್ಬ ವ್ಯಕ್ತಿ ಹೇಳುತ್ತಾರೆ.
“ನೀರವ್ ಮೋದಿ ನನಗೆ ಫೋನ್ ಮಾಡಿ, ನನ್ನನ್ನು ಕಳ್ಳತನದ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೇಳಿದ್ದರು. ಅವರು ಕೆಟ್ಟ ಭಾಷೆಯಲ್ಲಿ ಬೈದರು. ನನ್ನನ್ನು ಕೊಲ್ಲಿಸುವುದಾಗಿ ಹೇಳಿದರು. ಅವರು ನಮಗೆ ತುಂಬಾ ಹಿಂಸೆ ಕೊಟ್ಟಿದ್ದಾರೆ” ಎಂದು ಅವರು ಹಿಂದಿಯಲ್ಲಿ ಹೇಳಿದ್ದಾರೆ.
ತಾವು ಕೊಲ್ಲಿ ದೇಶಗಳು ಮತ್ತು ಹಾಂಕಾಂಗ್‌ಗಳಲ್ಲಿರುವ ಕಂಪೆನಿಗಳ ನಾಮ್‌ಕಾವಾಸ್ತೆ ಮಾಲೀಕರಾಗಿದ್ದೆವು ಎಂದು ಇತರ ಐವರು ಸಿಬಿಐ ಸಾಕ್ಷಿಗಳು ಹೇಳಿದ್ದಾರೆ. ಆದರೆ, ಈ ಕಂಪೆನಿಗಳನ್ನು ನೀರವ್ ಮೋದಿಯೇ ನೇರವಾಗಿ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.







