ದಿಲ್ಲಿಯಿಂದ ವಿಶೇಷ ರೈಲಿನಲ್ಲಿ ಬೆಂಗಳೂರಿಗೆ ಬಂದ 537 ಪ್ರಯಾಣಿಕರು: ಕ್ವಾರಂಟೈನ್‍ಗೆ ಹೋಗುವುದಿಲ್ಲ ಎಂದು ಪಟ್ಟು

ಬೆಂಗಳೂರು, ಮೇ 14: ದಿಲ್ಲಿಯಿಂದ ವಿಶೇಷ ರೈಲಿನಲ್ಲಿ ಬೆಂಗಳೂರಿಗೆ ಬಂದ ಪ್ರಯಾಣಿಕರು ಕ್ವಾರಂಟೈನ್‍ಗೆ ಒಳಗಾಗಲು ಒಪ್ಪದೆ ಕಿರಿಕಿರಿ ಮಾಡಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ದಿಲ್ಲಿಯಿಂದ 537 ಮಂದಿ ಬೆಂಗಳೂರಿಗೆ ರೈಲಿನಲ್ಲಿ ಆಗಮಿಸಿದಾಗ ಅವರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಲಾಗುತ್ತಿತ್ತು. ಇದರಿಂದ ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕಿದ್ದು, ನಮಗೆ ಕ್ವಾರಂಟೈನ್ ಮಾಡುವ ವಿಚಾರವೇ ಗೊತ್ತಿರಲಿಲ್ಲ. ಕ್ವಾರಂಟೈನ್ ಆಗಲು ನಾವು ಇಲ್ಲಿ ಬರಬೇಕಿತ್ತಾ ಎಂದು ಕಿಡಿಕಾರಿದ್ದಾರೆ.
ದಿಲ್ಲಿಯಿಂದ ಬಂದ ರೈಲಿನಲ್ಲಿ ಕುಡಿಯೋಕೆ ನೀರಿಲ್ಲ. ಟಾಯ್ಲೆಟ್‍ನಲ್ಲಿ ಕೂಡ ನೀರು ಇರಲಿಲ್ಲ. ಇದೀಗ ಕ್ವಾರಂಟೈನ್ ಎನ್ನುತ್ತಿದ್ದಾರೆ. ದಿಲ್ಲಿಯಿಂದ ಇಲ್ಲಿಗೆ ಬರುವ ತನಕ ಹಿಂಸೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಊಟ, ತಿಂಡಿ ಕೊಡಲೇಬೇಡಿ. ಕ್ವಾರಂಟೈನ್ ಮಾಡುತ್ತಾರೆ ಎಂದು ತಿಳಿರಲಿಲ್ಲ. ನಾವು ಬಡವರು, 1,800-2,000 ರೂ. ಹೋಟೆಲ್‍ಗೆ ಹೇಳುತ್ತಿದ್ದಾರೆ. ನಾವು ಎಲ್ಲಿಂದ ಹಣ ತರುವುದು ಎಂದು ದಿಲ್ಲಿಯಿಂದ ಬಂದ ಮಹಿಳಾ ಪ್ರಯಾಣಿಕರೊಬ್ಬರು ಕಿಡಿಕಾರಿದ್ದಾರೆ.
ರೈಲು ನಿಲ್ದಾಣಕ್ಕೆ ಬಂದಾಗ ಒಂದು ಬೋಗಿಯ ನಂತರ ಇನ್ನೊಂದು ಬೋಗಿಯಲ್ಲಿದ್ದ ಪ್ರಯಾಣಿಕರು ಇಳಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಎಲ್ಲಾ ಪ್ರಯಾಣಿಕರಿಗೆ ವೈದ್ಯರು ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ನಂತರ 11 ಬಿಎಂಟಿಸಿ ಬಸ್ಸುಗಳ ಮೂಲಕ ನಿಗದಿತ ಹೋಟೆಲ್‍ಗಳಿಗೆ ಕ್ವಾರಂಟೈನ್‍ಗೆ ಪೊಲೀಸರು ಹಾಗೂ ಬಿಬಿಎಂಪಿ, ಕಂದಾಯ ಇಲಾಖೆ ಸಿಬ್ಬಂದಿ ಕರೆದುಕೊಂಡು ಹೋದರು.
ದಿಲ್ಲಿಯಿಂದ ಬಂದವರಿಗೆ ಕ್ವಾರಂಟೈನ್: ದಿಲ್ಲಿಯಿಂದ ಬೆಂಗಳೂರಿಗೆ ಬಂದಿರುವ ಬಹುತೇಕ ನಾಗರಿಕರನ್ನು ಹೊಟೇಲ್ ಕ್ವಾರಂಟೈನ್ ಮಾಡಲಾಗಿದೆ. ಕೆಲವರು ಹೋಟೆಲ್ ಕ್ವಾರಂಟೈನ್‍ಗೆ ಒಳಪಡುವುದಿಲ್ಲ. ನಮಗೆ ಮಾಹಿತಿ ಇಲ್ಲ ಎಂದು ಚಕಾರ ಎತ್ತಿದ್ದು, ಅವರನ್ನು ಮನವೊಲಿಸುವ ಕೆಲಸ ನಡೆದಿದೆ. ಹೊರ ರಾಜ್ಯದಿಂದ ಬಂದವರಿಗೆ ಹೊಟೇಲ್ ಕ್ವಾರಂಟೈನ್ ಕಡ್ಡಾಯವಾಗಿದ್ದು, ಅವರೆಲ್ಲನ್ನು ಹೊಟೇಲ್‍ನಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.
ಕೆಲವರು ಮಧ್ಯದಲ್ಲೇ ಪರಾರಿ
ದಿಲ್ಲಿಯಿಂದ ಬೆಂಗಳೂರಿಗೆ ಟಿಕೆಟ್ ತೆಗೆದುಕೊಂಡಿದ್ದದ್ದು 687 ಜನ. ಆದರೆ, ಬೆಂಗಳೂರಿಗೆ ತಲುಪಿರುವುದು ಕೇವಲ 537 ಮಂದಿ ಮಾತ್ರ. ಸುಮಾರು 150 ಮಂದಿ ಮಧ್ಯದಲ್ಲೇ ತಪ್ಪಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆ 150 ಮಂದಿ ಎಲ್ಲಿ ಇಳಿದುಕೊಂಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಷ್ಟೂ ಜನರನ್ನು ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿದು ಆಂಧ್ರದಲ್ಲಿ ಇಳಿದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಆಂಧ್ರಪ್ರದೇಶ ಸರಕಾರಕ್ಕೆ ಮಾಹಿತಿ ರವಾನಿಸಲಾಗಿದೆ.









