ಜನರೇಟರ್ ಕಳವು ಪ್ರಕರಣ : ಆರೋಪಿ ಬಂಧನ
ಮಂಗಳೂರು, ಮೇ 14: ಟಯರ್ ರಿಸೋಲ್ ಅಂಗಡಿಯಲ್ಲಿರಿಸಲಾದ ಲಕ್ಷಾಂತರ ರೂ. ಬೆಲೆಯ ಜನರೇಟರ್ ಕಳವು ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಾವೂರು ಕಿಲ್ಲೂರು ನಿವಾಸಿ ವಸಂತ (52) ಬಂಧಿತ ಆರೋಪಿ.
ಸುರತ್ಕಲ್ ಬಾಳದಲ್ಲಿ ಮಂಜನಾಡಿಯ ಮೊಂಟೆಪದವು ನಿವಾಸಿ ಎಎಂ ಜಮೀಲ್ ಎಂಬವರು ಕಳೆದ ಎರಡು ವರ್ಷಗಳಿಂದ ಎಎಂಜೆ ನ್ಯೂ ಮಂಗಳೂರು ಟಯರ್ ವರ್ಕ್ಸ್ ಅನ್ನುವ ಅಂಗಡಿ ಹೊಂದಿದ್ದರು. ಅದನ್ನು ಕೆಲ ಸಮಯದಿಂದ ವಸಂತ ಎಂಬವರಿಗೆ ನೋಡಿಕೊಳ್ಳಲು ಬಿಟ್ಟಿದ್ದರು. ಇತ್ತೀಚೆಗೆ ಅಂಗಡಿ ನೋಡಲು ತೆರಳಿದ್ದ ಎ.ಎಂ ಜಮೀಲ್ ತನ್ನ ಅಂಗಡಿಯ ಮುಂದೆ ಇರಿಸಲಾಗಿದ್ದ 4,75,000 ರೂ. ಮೊತ್ತದ ಅಶೋಕ್ ಲೈಲಾಂಡ್ ಕಂಪೆನಿಯ 62.5 ಕೆ.ವಿ ಸಾಮರ್ಥ್ಯದ ಜನರೇಟರ್ ನಾಪತ್ತೆಯಾಗಿ ದ್ದನ್ನು ಗಮನಿಸಿದರು. ಈ ಬಗ್ಗೆ ವಸಂತನ ಬಳಿ ಕೇಳಿದಾಗ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಅಲ್ಲದೆ ಉಡಾಫೆಯಿಂದ ವರ್ತಿಸಿದ್ದರೆನ್ನಲಾಗಿದೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಜಮೀಲ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.





