ಊರಿಗೆ ತೆರಳಲು ಸಹಕರಿಸುವ ಜತೆಗೆ ಊಟವನ್ನೂ ಕಟ್ಟಿ ಕೊಟ್ಟ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ !
ವಲಸೆ ಕಾರ್ಮಿಕರಿಗೆ ಹೀಗೊಂದು ಸಹಾಯ ಹಸ್ತ

ಮಂಗಳೂರು, ಮೇ 14: ಕಳೆದ ಕೆಲವು ದಿನಗಳಿಂದ ತಮ್ಮ ಊರುಗಳಿಗೆ ತೆರಳಲು ಜೋಕಟ್ಟೆ ಸುತ್ತಮುತ್ತ ಇರುವ ವಲಸೆ ಕಾರ್ಮಿಕರು ರೈಲಿಗಾಗಿ ಪರದಾಡುತ್ತಿದ್ದ, ಕೈಯ್ಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದ ಅವರಿಗೆ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸಹಾಯ ಹಸ್ತ ನೀಡಿದೆ.
ಸುಮಾರು 4000ದಷ್ಟು ವಲಸೆ ಕಾರ್ಮಿಕರು ಜೋಕಟ್ಟೆ ಸಮೀಪ ಅತಂತ್ರರಾಗಿದ್ದು, ಅವರಲ್ಲಿ ಬಿಹಾರ ರಾಜ್ಯಕ್ಕೆ ಸೇರಿದವರು ರೈಲಿನ ಮೂಲಕ ಊರುಗಳಿಗೆ ತೆರಳಿದ್ದಾರೆ. (ಜಾರ್ಖಂಡ್, ಉತ್ತರ ಪ್ರದೇಶಕ್ಕೆ ಸೇರಿದವರು ಇನ್ನೂ ಇದ್ದಾರೆ). ಅವರು ಊರುಗಳಿಗೆ ತೆರಳಲು ಪೊಲೀಸ ರೊಂದಿಗೆ ಕೈಜೋಡಿಸಿ ನಿರಂತರ ಪ್ರಯತ್ನದ ಜತೆಗೆ ಅವರಿಗೆ ಊಟ, ವಸತಿ ವ್ಯವಸ್ತೆಯನ್ನು ಡಿವೈಎಫ್‌ಐ ಮಾರ್ಗದರ್ಶನದ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಮಾಡಿದೆ.
ಸಮಿತಿಯ ಮುಖಂಡರಾದ ಅಬೂಬಕರ್ ನೇತೃತ್ವದಲ್ಲಿ ಕಾರ್ಮಿಕರಿಗೆ ಹೊಟ್ಟೆತುಂಬಾ ಊಟ ನೀಡಿದ್ದಲ್ಲದೆ, ಪ್ರಯಾಣದಲ್ಲಿ ಹಸಿವು ನೀಗಿಸಲು ಊಟದ ಪೊಟ್ಟಣವನ್ನು ಕಟ್ಟಿ ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು.
ಇಂದು ತೆರಳಿದ ಬಿಹಾರದ ಕಾರ್ಮಿಕರಲ್ಲಿ 14 ಜನರ ರೈಲು ಪ್ರಯಾಣ ಖಾತರಿಯಾಗಿದ್ದರೂ ಕೈಯ್ಯಲ್ಲಿ ನಯಾ ಪೈಸೆಯೂ ಇಲ್ಲದೆ ಪ್ರಯಾಣ ರದ್ದುಗೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭ ಈ ಅಸಹಾಯಕ ಕಾರ್ಮಿಕರಿಗೆ ಅಬುಬೂಕರ್ ಅವರೇ ಸುಮಾರು 15,000 ರೂ.ಗಳನು ತಮ್ಮ ಕೈಯಿಂದ ಭರಿಸಿ ಕಾರ್ಮಿಕರನ್ನು ಬೀಳ್ಕೊಟ್ಟರು. ಕೆಲ ದಿನಗಳ ಹಿಂದೆ ಉತ್ತರ ಭಾರತ ಮೂಲದ ಕಾರ್ಮಿಕರು ಟಿಕೆಟ್‌ಗೆ ದುಡ್ಡಿಲ್ಲದೆ ಅಸಹಾಯಕರಾಗಿದ್ದಾಗ ಅಬೂಬಕ್ಕರ್ ಅವರೇ ಟಿಕೇಟ್ ಖರೀದಿಸಿ ನೀಡಿದ್ದರು.
ಪ್ರಚಾರದಿಂದ ಮಾರು ದೂರ ಸರಿಯುವ, ಪಂಚಾಯತ್ ಸದಸ್ಯರೂ ಆಗಿರುವ ಅಬೂಬಕ್ಕರ್‌ರವರ ಈ ನಡೆ ಸ್ಥಳೀಯ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.







